ಕನಕಪುರ: ನಗರಸಭೆ ವ್ಯಾಪ್ತಿಯ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ,ಪರಿಶಿಷ್ಟ ಜಾತಿ ಹಾಗೂ ಬಡ ಜನರಿಗೆ ರಾಜೀವ್‌ಗಾಂಧಿ ವಸತಿ ಯೋಜನೆಯಲ್ಲಿ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿಯ 698 ಮನೆಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶ್ರೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಹೊಸಕೋಟೆ ಸಮೀಪ 22 ಎಕರೆ ಪ್ರದೇಶದಲ್ಲಿ ನಗರಸಭೆ ಗುರುತು ಮಾಡಿರುವ ನಿವೇಶನಗಳ ಸ್ಥಳದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿವೇಶನ ಮಂಜೂರಾಗಿರುವ ಫಲಾನುಭವಿಗಳು ತಮಗೆ ವಿಲೇ ಆಗಿರುವ ನಿವೇಶನಗಳನ್ನು 20 ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಒಂದು ಮನೆ ನಿರ್ಮಾಣಕ್ಕೆ 6.74 ಲಕ್ಷ ರೂ.ವೆಚ್ಚವಾಗಲಿದೆ. ಮನೆ ಕಟ್ಟಲು ಪರಿಶಿಷ್ಟ ಜಾತಿ ಹಾಗೂ ವರ್ಗದವರು 67 ಸಾವಿರ ರೂ. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು 1.01 ಲಕ್ಷರೂ.ಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ಡಿ.ಡಿ. ಮೂಲಕ ಹಣ ಸಂದಾಯ ಮಾಡಿದರೆ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಕೊಳಚೆ ನಿರ್ಮೂಲನಾ ಮಂಡಳಿ ಇದಕ್ಕೆ ಸಾಲ ಸೌಲಭ್ಯ ಕೂಡ ಒದಗಿಸಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ನಗರ ವ್ಯಾಪ್ತಿಯ ಅರ್ಹ ಬಡವರಿಗೆ ನಿವೇಶನ ದೊರಕಿಸುವ ಉದ್ದೇಶದಿಂದ ಟೌನ್ ವ್ಯಾಪ್ತಿಯಲ್ಲಿ 2500ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಲು ಕ್ರಮ ಕೈಗೊಳ್ಳಲಾಗಿದೆ. ಟೌನ್ ವ್ಯಾಪ್ತಿಯ ಕಡು ಬಡವರನ್ನು ಗುರುತಿಸಿ ಪಾರದರ್ಶಕತೆಯಿಂದ ನಿವೇಶನಗಳನ್ನು ಹಂಚಲಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಕೆ.ಎನ್. ವೆಂಕಟೇಶ್, ಉಪಾಧ್ಯಕ್ಷ ರಾಮದುರ್ಗ, ತಾಪಂ ಮಾಜಿ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ್, ನಗರಸಭೆ ಮಾಜಿ ಅಧ್ಯಕ್ಷ ಆರ್.ರಾಮಚಂದ್ರ, ಕೆ.ಎನ್. ದಿಲೀಪ್, ಮಕ್ಬುಲ್ ಪಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಎಂ.ಡಿ. ವಿಜಯದೇವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ನಗರಸಭೆ ಸದಸ್ಯರು ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಇದ್ದರು.