ಗುಂಡ್ಲುಪೇಟೆ ತಾಲೂಕಿನ ಶಿವಪುರ ಸಮೀಪ ಆಟೋ ಮಗುಚಿ ಗಾಯಗೊಂಡವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  
ಜಿಲ್ಲೆ

ಗೂಡ್ಸ್ ವಾಹನ ಪಲ್ಟಿಯಾಗಿ 15ಕ್ಕೂ ಹೆಚ್ಚು ಜನರಿಗೆ ಗಾಯ

ಗುಂಡ್ಲುಪೇಟೆ: ತಾಲೂಕಿನ ಶಿವಪುರ ಸಮೀಪ ಭೀಮನ ಅಮಾವಾಸ್ಯೆ ಜಾತ್ರೆಗೆ ಹೋಗಿದ್ದ ಭಕ್ತರ ಗೂಡ್ಸ್ ವಾಹನ ಪಲ್ಟಿಯಾಗಿ ಸುಮಾರು 15ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ತಾಲೂಕಿನ ಅಂಕಹಳ್ಳಿ ಹಾಗೂ ಬಾಚಹಳ್ಳಿ ಗ್ರಾಮಗಳಿಂದ ಕೋಡಹಳ್ಳಿ ಸಮೀಪದ ಮಹದೇಶ್ವರ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ನಡೆಯುತ್ತಿದ್ದ ಜಾತ್ರೆಗೆ ಹೋಗಿದ್ದ ಮಹಿಳೆಯರು ಹಾಗೂ ಮಕ್ಕಳು, ಊರಿಗೆ ಹೋಗಲು ಟಾಟಾ ಏಸ್ ಗೂಡ್ಸ್ ವಾಹನ ಹತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರನ್ನು ಹೊತ್ತೊಯ್ಯುತ್ತಿದ್ದ ವಾಹನವು ಶಿವಪುರ ಸಮೀಪದ ತಿರುವಿನಲ್ಲಿ ಪಲ್ಟಿಯಾಗಿದ್ದು, ಮಕ್ಕಳು ಸೇರಿದಂತೆ 15ಕ್ಕೂ ಹೆಚ್ಚಿನ ಜನರಿಗೆ ತೀವ್ರ ಪೆಟ್ಟು ಬಿದ್ದಿದೆ.

ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದರು. ತೀವ್ರ ಗಾಯಗೊಂಡಿದ್ದ 12 ಜನರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಾಟಾ ಏಸ್ ವಾಹನ ಹಾಗೂ ಚಾಲಕ ಅಂಕಹಳ್ಳಿ ಗ್ರಾಮದ ವೆಂಕಟಸ್ವಾಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.