ಜಿಲ್ಲೆ

ಗೂಂಡಾಗಳಿಗೆ ಆಶ್ರಯ ಸಲ್ಲದು

Chikkamagaluru

ಚಿಕ್ಕಮಗಳೂರು:  ಯಾವುದೆ ರಾಜಕೀಯ ಪಕ್ಷ ಗೂಂಡಾಗಳನ್ನು ಸೇರಿಸಿಕೊಂಡು ಅವರಿಗೆ ಆಶ್ರಯ ಮತ್ತು ಶಕ್ತಿ ತುಂಬುವುದನ್ನು ಬಿಲ್​ಕುಲ್ ಒಪ್ಪುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ರೌಡಿಶೀಟರ್​ಗಳನ್ನು ರೌಡಿಗಳೆಂದು ಹೇಳಬೇಡಿ ಎಂದು ಶಾಸಕ ಸಿ.ಟಿ.ರವಿ ಫರ್ವನು ಹೊರಡಿಸಿ ರೌಡಿಗಳ ರಕ್ಷಣೆಗೆ ನಿಂತಿದ್ದಾರೆಂದು ಕಾಂಗ್ರೆಸ್ ಮಾಡಿರುವ ಟ್ವೀಟ್​ಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್​ಗೆ ಈ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ರೌಡಿಗಳನ್ನು ಬೆಳೆಸಿರೋದೇ ಕಾಂಗ್ರೆಸ್ ಪಕ್ಷ. ಹಾಗೆಂದು ನಮ್ಮ ಪಕ್ಷ ರೌಡಿಗಳನ್ನು ಸೇರಿಸಿಕೊಳ್ಳುವುದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಆ ಕ್ಷಣದಲ್ಲೇ ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿ ಏನು ನಿರ್ಧಾರ ಕೈಗೊಳ್ಳಬೇಕೋ ಅದನ್ನು ಸ್ಪಷ್ಟಪಡಿಸಿದ್ದೇನೆ ಎಂದರು.

ನಾನೂ ಸೇರಿದಂತೆ ಸಚಿವ ಸುನಿಲ್​ಕುಮಾರ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮತ್ತಿತರರನ್ನು ರೌಡಿಲಿಸ್ಟ್​ನಲ್ಲಿಟ್ಟಿದ್ದರು. ನಾವು ರೌಡಿಗಳಾ? ಎಲ್ಲಿ ರೌಡಿಸಂ ಮಾಡಿದ್ದೆವು? ಆದರೆ ನಮ್ಮನ್ನು ರೌಡಿಲಿಸ್ಟ್​ನಲ್ಲಿ ಸೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದೆ. ರೌಡಿ ಶೀಟರ್​ಗಳಲ್ಲಿರುವ ಎಲ್ಲರಿಗೂ ನಾನು ಕ್ಲೀನ್ ಚೀಟ್ ಕೊಟ್ಟಿಲ್ಲ ಅವರು ಹಾಗೆ ಭಾವಿಸುವುದು ಬೇಡ ಎಂದು ಸ್ಪಷ್ಟಪಡಿಸದರು.

ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದವನು ಯಾವ ಗೂಡಾಗಿರಿ ಮಾಡಿದ್ದೇನೆ? ವೈಯುಕ್ತಿಕ ಗಲಾಟೆಯ ಒಂದು ದೂರೂ ಇಲ್ಲ. ನನ್ನಮೇಲಿರುವುದೆಲ್ಲಾ ಸಾರ್ವಜನಿಕ ಹೋರಾಟಗಳ ಕೇಸುಗಳು. ರಾಜಕೀಯ ಕಾರಣಕ್ಕೆ ನನ್ನನ್ನು ರೌಡಿ ಲಿಸ್ಟ್​ಗೆ ಸೇರಿಸಿದ್ದರು. ಜಯರಾಜ್, ಕೊತ್ವಾಲನ ಶಿಷ್ಯನೂ ನಾನಲ್ಲ, ಹಾಗೆ ಹೇಳಿಕೊಂಡು ಹೆಮ್ಮೆಪಡುವ ರಾಜಕೀಯ ನೇತಾರರ ಸಾಲಿಗೆ ಸೇರಿದವನೂ ನಾನಲ್ಲ. ನಾನು ಆರ್​ಎಸ್​ಎಸ್ ಸ್ವಯಂ ಸೇವಕ, ಆ ಗರಡಿಯಲ್ಲಿ ಬೆಳೆದವನು ಎಂದರು.

ಕನಕದಾಸರು ಹಿಂದು ಧರ್ಮದ ಪ್ರತಿಪಾದಕ:  ಯಾರು ಸಂಗೊಳ್ಳಿ ರಾಯಣ್ಣ, ಕನಕದಾಸರನ್ನು ಮತ್ತು ಅವರ ವಿಚಾರವನ್ನು ಒಪ್ಪುತ್ತಾರೋ ಆ ಎಲ್ಲ ಜನಜಾತಿ ಮೀರಿ ನಮ್ಮೊಂದಿಗೆ ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಕನಕದಾಸರ ಪ್ರತಿಪಾದನೆ ಹಿಂದು ಧರ್ಮ ಮತ್ತು ಸನಾತನ ಧರ್ಮದ ಪ್ರತಿಪಾದನೆಯೇ ಹೊರತು ಧರ್ಮದ ಅವಹೇಳನವಲ್ಲ. ಹಾಗಾಗಿ ಧರ್ಮದ ಅವಹೇಳನ ಮಾಡುವವರು ನಮ್ಮನ್ನು ವಿರೋಧಿಸುತ್ತಾರಷ್ಟೇ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕನಕ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕನಕ ಜಯಂತಿ ಆರಂಭಿಸಿದ್ದು ಬಿಜೆಪಿ ಸರ್ಕಾರ. ಅದಕ್ಕೂ ಹಿಂದೆ ಬಹಳಷ್ಟು ಘಟಾನುಘಟಿಗಳು ಡಿಸಿಎಂ, ಸಿಎಂ ಆಗಿಹೋಗಿದ್ದರೂ ಏನೂ ಮಾಡಿರಲಿಲ್ಲ. ಕುರುಬರು ಹಿಂದುಗಳು ಅಲ್ಲವೋ? ಹಿಂದುಗಳಾಗಿ ಆಲೋಚಿಸುವವರು ಹಿಂದು ಧರ್ಮ ಅವಹೇಳನ ಮಾಡುತ್ತಾರಾ? ಬಹುತೇಕ ಎಲ್ಲ ಮಠದ ಸ್ವಾಮೀಜಿಗಳು ಕೇಸರಿ ಮತ್ತು ಕಾವಿ ಧರಿಸುತ್ತಾರೆ. ಕೇಸರಿ-ಕಾವಿಯನ್ನು ಶತ್ರು ರೀತಿ ನೋಡಿದವರ್ಯಾರು? ಎಂದು ಸಿ.ಟಿ.ರವಿ ಪ್ರಶ್ನಿಸಿದರು.