ಜಿಲ್ಲೆ

ಗೂಂಡಾ ಕಾಯ್ದೆಯಡಿ ಬಂಧನ

ಶಿರಸಿ: ಇಲ್ಲಿನ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ದೊಂಬಿ, ಕಳ್ಳತನ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಸ್ತೂರಬಾ ನಗರದ ನಿವಾಸಿ ಮಹ್ಮದ್ ಫಾರೂಕ್ ಪಟೇಲ್​ಎಂಬುವರನ್ನು ಸೋಮವಾರ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.

ರೌಡಿ ಶೀಟರ್ ಮಹ್ಮದ್ ಫಾರೂಕ್ ಪಟೇಲ್ ವಿರುದ್ಧ ಹೊಸ ಮಾರುಕಟ್ಟೆ ಠಾಣೆಯಲ್ಲಿ ಕಳ್ಳತನ, ಕೊಲೆ, ಕೊಲೆಯ ಸಾಕ್ಷ್ಯನಾಶ, ಕೊಲೆಗೆ ಸಂಚು, ಪ್ರಯತ್ನ, ದೊಂಬಿ, ಬಲವಂತದ ಹಣ ಸುಲಿಗೆ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವು. ಇತನ ಅಪರಾಧಿಕ ಕೃತ್ಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಠಾಣೆಯಲ್ಲಿ ಎಂಒಬಿ ಶೀಟ್, ರೌಡಿ ಶೀಟ್​ಗಳನ್ನು ತೆರೆಯಲಾಗಿತ್ತು. ಆದರೂ ಈತ ಎಸ್​ಡಿಪಿಐ ಸಂಘಟನೆಯೊಂದಿಗೆ ಸೇರಿ ಪುಂಡರ ಗುಂಪು ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ. ಇದನ್ನು ನಿಯಂತ್ರಿಸಲು ಡಿಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಇತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಅಪರಾಧಿಕ ಕೃತ್ಯ, ಚಟುವಟಿಕೆಗಳಲ್ಲಿ ನಿರತರಾದ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತ ರೌಡಿ ಆಸಾಮಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.