ನ್ಯಾಯಬೆಲೆ ಅಂಗಡಿ ಮುಂದೆ ಪಡಿತರ ವಿತರಣೆಗೆ ಕಾಯುತ್ತಿರುವುದು  
ಜಿಲ್ಲೆ

ಗುಹ್ಯ ನ್ಯಾಯಬೆಲೆ ಅಂಗಡಿಗೆ ಆಹಾರ ಪರಿವೀಕ್ಷಕ ಭೇಟಿ

ಎ. ಆರ್. ರಘುರಾಮ

ಸಿದ್ದಾಪುರ: ಎರಡು ತಿಂಗಳಿನಿಂದ ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗುಹ್ಯ ನ್ಯಾಯಬೆಲೆ ಅಂಗಡಿಗೆ ವಿರಾಜಪೇಟೆ ತಾಲೂಕಿನ ಆಹಾರ ಪರಿವೀಕ್ಷಕರಾದ ಸೀನಾ ಕುಮಾರಿ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಅಂಗಡಿಯಲ್ಲಿ ಅಕ್ಕಿಯ ಕೊರತೆ ಕಂಡುಬರುತ್ತಿದ್ದು ಇದಕ್ಕೆ ನ್ಯಾಯಬೆಲೆ ಅಂಗಡಿಯವರೇ ಜವಾಬ್ದಾರರು. ಸರ್ಕಾರದ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಸಾರ್ವಜನಿಕರ ನೀಡಿರುವ ದೂರಿನ ವಿಚಾರವನ್ನು ಮೇಲಧಿಕಾರಿ ಗಮನಕ್ಕೆ ತರಲಾಗುವುದು ಎಂದು ಸೀನಾಕುಮಾರಿ ಎಚ್ಚರಿಸಿದರು.

ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರಿದ್ದು, 300 ಹೆಚ್ಚು ಕಾರ್ಡ್‌ದಾರರಿದ್ದಾರೆ. 200 ಜನರಿಗೆ ಮಾತ್ರ ಅಕ್ಕಿ ಸಿಗುತ್ತಿದೆ. ಬಹುತೇಕ ಕಾರ್ಮಿಕ ಕುಟುಂಬ ಅಕ್ಕಿ ಅವಲಂಬಿತರಾಗಿದ್ದು, ಅಕ್ಕಿ ಸಿಗದೇ ಸಮಸ್ಯೆ ಎದುರಿಸುವಂತಾಗಿದೆ. ಈ ಸಮಸ್ಯೆ ಬಗೆಹರಿಯದಿದ್ದಲ್ಲಿ ಆಹಾರ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಿದ್ದಾಪುರ ಗ್ರಾಪಂ ಸದಸ್ಯ ಹಸ್ಸನ್ ಎಚ್ಚರಿಸಿದರು.

ಅಂಗಡಿಯ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಪಡಿತರದಾರರಿದ್ದು, ತಿಂಗಳಿಗೆ ಬರುವ ಅಕ್ಕಿಯಲ್ಲಿ 180 ರಿಂದ 200 ಜನರಿಗೆ ಮಾತ್ರ ಅಕ್ಕಿ ಸಿಗುತ್ತಿದೆ. ಪಡಿತರದಾರರು ಇದನ್ನು ಪ್ರಶ್ನಿಸಿದರೆ ಆಹಾರ ಇಲಾಖೆಯಿಂದ ವಿತರಣೆ ಆಗುತ್ತಿರುವ ಅಕ್ಕಿ ಕಡಿಮೆ ಬರುತ್ತಿದೆ ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಅಕ್ಕಿ ಸಿಗದವರ ಬೆರಳಚ್ಚು ಮತ್ತು ಒಟಿಪಿ ಪಡೆದು ಚೀಟಿಯಲ್ಲಿ ಬರೆದು ಕಳಿಸಲಾಗುತ್ತಿದೆ. ಪಡಿತರದಾರರಿಗೆ ಕೆಲವು ತಿಂಗಳಿಗಳಿಂದ ಉಳಿಕೆ, ಬಾಕಿ ಅಕ್ಕಿ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ. ಕೆಲವು ಮಹಿಳೆಯರಿಗೆ ಪ್ರತಿ ಬಾರಿಯೂ ಸಾಲುಗಟ್ಟಿ ನಿಂತರೂ 3, 4 ತಿಂಗಳಿನಿಂದ ಅಕ್ಕಿ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿ ತಿಂಗಳು ಇಲಾಖೆ ಮೂಲಕ ಸರಬರಾಜಾಗುವ ಅಕ್ಕಿಯನ್ನು ನಿಗದಿತ ಸಮಯ, ದಿನಾಂಕದಂದು ವಿತರಣೆ ಮಾಡಬೇಕೆಂಬ ಸೂಚನೆ ಇದ್ದರೂ ನ್ಯಾಯಬೆಲೆ ಅಂಗಡಿಯವರು ಅದನ್ನು ಪಾಲನೆ ಮಾಡುತ್ತಿಲ್ಲ. ಎರಡು ದಿನಗಳಿಂದ ಗಾಳಿ, ಮಳೆ ಲೆಕ್ಕಿಸದೆ ತೋಟದ ಕೆಲಸಕ್ಕೂ ತೆರಳದೆ ಅಕ್ಕಿಗಾಗಿ ಅಂಗಡಿ ಮುಂದೆ ಕಾದು ಕುಳಿತರೂ ಸಮಯಕ್ಕೆ ಸರಿಯಾಗಿ ಅಂಗಡಿ ತೆರೆಯುತ್ತಿಲ್ಲ. ಹೀಗಾಗಿ ಗುಹ್ಯ ಲೈಸೆನ್ಸ್ ರದ್ದುಪಡಿಸಬೇಕೆಂದು ಪಡಿತರದಾರರು ಒತ್ತಾಯಿಸಿದರು.