ಗುಳೇದಗುಡ್ಡ: ಹಲವು ಕೃತಿಗಳನ್ನು ಬರೆದಿರುವ ಪ್ರೊ.ಪಿ.ಎಂ.ಹುಗ್ಗಿ ಅವರು ಕನ್ನಡ ಮತ್ತು ತತ್ವಶಾಸ ಎರಡು ವಿಷಯದಲ್ಲಿ ಪಿಎಚ್.ಡಿಯನ್ನು ಬಂಗಾರ ಪದಕದೊಂದಿಗೆ ಪಡೆದಿದ್ದಾರೆ. ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಡಾ.ಎಚ್.ಎಸ್.ಘಂಟಿ ಹೇಳಿದರು.
ತಾಲೂಕಿನ ಕೊಂಕನಕೊಪ್ಪ ಗ್ರಾಮದ ದ್ಯಾಮವ್ವ ತಾಯಿ ದೇವಸ್ಥಾನದಲ್ಲಿ ಶುಕ್ರವಾರ ಪ್ರೊ. ಹುಗ್ಗಿ ಅವರನ್ನು ಸನ್ಮಾನಿಸಿ ಕಟಗೇರಿಯಲ್ಲಿ 10 ರಂದು ನಡೆಯುವ 4 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಔಪಚಾರಿಕವಾಗಿ ಆಹ್ವಾನ ನೀಡಿ ಮಾತನಾಡಿದರು. ಹುಗ್ಗಿ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಖುಷಿ ಸಂಗತಿಯಾಗಿದೆ. ಸಮ್ಮೇಳನವನ್ನು ನಮ್ಮೂರ ಹಬ್ಬದಂತೆ ಆಯೋಜನೆ ಮಾಡುವುದಾಗಿ ತಿಳಿಸಿದರು.
ಬಾದಾಮಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ರವಿ ಕಂಗಳ, ಕಸಾಪ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹಾಲಿಗೇರಿ, ಎ.ಎಸ್.ಕಾಡರ ಹಾಗೂ ಎಲ್ಲ ಪದಾಧಿಕಾರಿಗಳು ಪ್ರೊ.ಪಿ.ಎಂ.ಹುಗ್ಗಿ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು. ಗೌರವ ಕಾರ್ಯದರ್ಶಿಗಳಾದ ಯಲ್ಲಪ್ಪ ಮನ್ನಿಕಟ್ಟಿ, ಪರಶುರಾಮ ಮಾದರ, ಗ್ರಾಮದ ಹಿರಿಯರಾದ ಬಿ.ಎಚ್.ಹಲಗಲಿ, ಮಲ್ಲಪ್ಪ ಗುರುಪಾದಪ್ಪನವರ, ರಮೇಶ ಗೌಡರ, ಕೃಷ್ಣಪ್ಪ ತೇರದಾಳ, ಯಲ್ಲಪ್ಪ ಸಣ್ಣೆಲ್ಲಪ್ಪನವರ ಮುಂತಾದವರಿದ್ದರು.