ಬೀದರ್: ಗುಲ್ಬರ್ಗ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರದಲ್ಲಿ ಪ್ರತಿಭಟನೆ ನಡೆಸಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪರಿಷತ್ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು, 1984ರಲ್ಲಿ ಸ್ಥಾಪನೆಯಾದ ವಿವಿ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯೊಂದಿಗೆ ಕೆಲಸ ಮಾಡಿತ್ತು. ನಂತರದ ವರ್ಷಗಳಲ್ಲಿ ಶಿಕ್ಷಣದ ಕಾಶಿ ಅಕ್ಷರ ದಾಸೋಹದ ಮಂದಿರ ಆಗುವ ಬದಲು ಭ್ರಷ್ಟಾಚಾರದ ವ್ಯವಸ್ಥೆಯಾಗಿ ರೂಪುಗೊಂಡಿದೆ ಎಂದು ಕಿಡಿಕಾರಿದರು.
ಅನೇಕ ವರ್ಷಗಳಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಇಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಅಮಾಯಕ ವಿದ್ಯಾರ್ಥಿಗಳು ಶೈಕ್ಷಣಿಕ ಸಂಕಷ್ಟ ಅನುಭವಿಸಬೇಕಾಗಿದೆ ಎಂದು ದೂರಿದರು.
ವಿವಿಯಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಯಲ್ಲ. ಉದ್ದೇಶಪೂರ್ವಕವಾಗಿ ಅಂಕ ಪಟ್ಟಿಯಲ್ಲಿ ಶೂನ್ಯ ಬರುವಂತೆ ಮಾಡುವುದು, ವಿದ್ಯಾರ್ಥಿಗಳ ಅರ್ಜಿಗೆ ಸ್ಪಂದಿಸದಿರುವುದು, ಕುಂಟುನೆಪವೊಡ್ಡಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ತಡೆ, ಪದವಿ ಪರೀಕ್ಷೆ ಕೇಂದ್ರಗಳಿಗೆ ಅರ್ಹತೆ ಇಲ್ಲದ ಉಪನ್ಯಾಸಕರನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕ ಮಾಡುವುದು ನಡೆಯುತ್ತಿದೆ. ಹೊಸ ಪದವಿ ಕಾಲೇಜುಗಳಿಗೆ ನಿಯಮ ಮೀರಿ ಅರ್ಹತೆ ಮತ್ತು ಸೌಲಭ್ಯ ಇಲ್ಲದಿದ್ದರೂ ಅನುಮತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ವಿವಿಯಲ್ಲಿ ನೂರಾರು ಸಮಸ್ಯೆಗಳಿದ್ದು, ಅಮಾಯಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿವೆ. ಇದಕ್ಕೆ ಸರ್ಕಾರಗಳೇ ಹೊಣೆ. ಸರ್ಕಾರ ಕಠಿಣ ಕ್ರಮಗಳನ್ನು ವಿವಿ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕೈಗೊಂಡಿದ್ದರೆ ಭ್ರಷ್ಟಾಚಾರ ಬೇರೂರುತ್ತಿರಲಿಲ್ಲ. ತಕ್ಷಣ ಎಚ್ಚೆತ್ತುಕೊಂಡು ವಿವಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ, ನಗರ ಕಾರ್ಯದರ್ಶಿ ಅಂಬರೀಶ್ ಬಿರಾದಾರ್, ಸಿದ್ಧಾರ್ಥ ಬಾವಿದೊಡ್ಡಿ, ವಿಶಾಲ, ದರ್ಶನ, ಸತೀಶ, ಅಮರ, ಸ್ವಾತಿ, ಪ್ರೇಮಾ ಇತರರಿದ್ದರು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಲಾಯಿತು.