ಜಿಲ್ಲೆ

ಗುಲಾಮರನ್ನಾಗಿಸುವ ಕಾಯ್ದೆ ಕೈಬಿಡಿ

ಹೂವಿನಹಡಗಲಿ: ಕಾರ್ಮಿಕ ವಲಯದ ಮೇಲೆ ಹಿಡಿತ ಸಾಧಿಸುವ ಹಾಗೂ ಕಾರ್ಮಿಕರನ್ನು ಕಾರ್ಪೋರೇಟ್ ಕಂಪನಿಗಳ ಸೇವಕರನ್ನಾಗಿ ಮಾಡುವ ಉದ್ದೇಶದಿಂದ ದೇಶದಲ್ಲಿ ವಿವಿಧ ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಎಐಟಿಯುಸಿ ತಾಲೂಕು ಘಟಕದಿಂದ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಎಐಟಿಯುಸಿ ತಾಲೂಕು ಅಧ್ಯಕ್ಷೆ ಬಿ.ಜಯಲಕ್ಷ್ಮೀ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರಿಗೆ ಕಾಯಂ ಕೆಲಸ ನೀಡಬೇಕು. ಕೆಲಸದ ಅವಧಿಯನ್ನು ಎಂಟು ಗಂಟೆಗೆ ಸೀಮಿತಗೊಳಿಸಬೇಕು. ಕಾರ್ಮಿಕರನ್ನು ಕಾರ್ಪೋರೇಟ್ ಕಂಪನಿಗಳ ಗುಲಾಮರನ್ನಾಗಿಸುವ ಉದ್ದೇಶದಿಂದ ವಿವಿಧ ಸಂಹಿತೆಗಳನ್ನು ಜಾರಿಗೆ ತರಲಾಗುತ್ತಿದ್ದು, ಅವುಗಳನ್ನು ಕೂಡಲೇ ಕೈ ಬಿಡಬೇಕು. ದರ ಏರಿಕೆಗೆ ಅನುಗುಣವಾಗಿ ವೇತನ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಜಂಗ್ಲಿಸಾಬ್, ಪ್ರಧಾನ ಕಾರ್ಯದರ್ಶಿ ಬಸವರಾಜ ಸಂಶಿ, ಸಹಕಾರ್ಯದರ್ಶಿ ಚಂದ್ರಮ್ಮ, ಸದಸ್ಯರಾದ ಶಿಲ್ಪಾ, ಸವಿತಾ, ಮಂಜುಳಾ, ನಾಗರತ್ನ ಇತರರಿದ್ದರು.