ಜಿಲ್ಲೆ

ಗುರುಸಿದ್ದರಾಮೇಶ್ವರರ ಸಿದ್ಧಾಂತದಂತೆ ಅಭಿವೃದ್ಧಿ

ಕಡೂರು: ಗುರುಸಿದ್ದರಾಮೇಶ್ವರರ ಸಿದ್ಧಾಂತವನ್ನೇ ಆದರ್ಶವಾಗಿಟ್ಟುಕೊಂಡು ತಾಲೂಕಿನ ಅಭಿವೃದ್ಧಿಯಲ್ಲಿ ಶ್ರಮಿಸಲಾಗುತ್ತಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು. ಬನಶಂಕರಿ ಸಮುದಾಯ ಭವನದಲ್ಲಿ ಭಾನುವಾರ ನೊಳಂಬ ಕೇಂದ್ರ ಸಮಿತಿ, ನೊಳಂಬ ಉಪಸಮಿತಿ ಮತ್ತು ನೊಳಂಬ ವೀರಶೈವ ಲಿಂಗಾಯತ ನೌಕರರ ಸಂಘ ಏರ್ಪಡಿಸಿದ್ದ ಗುರುಸಿದ್ದರಾಮೇಶ್ವರ ಸಮುದಾಯ ಭವನದ ಭೂಮಿಪೂಜೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ಯಾವ ಉದ್ದೇಶದಿಂದ ಕ್ರಾಂತಿ ಮಾಡಿದರು ಆ ಉದ್ದೇಶ ಸಾಕಾರವಾಗಿದೆಯೇ ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಮುಂಬರುವ ದಿನಗಳಲ್ಲಿ ಯಾವ ಧರ್ಮವನ್ನು ಅನುಸರಿಸುವ ಸಮಾಜ ಕಟ್ಟಬೇಕಿದೆ ಎಂಬುದರ ಚಿಂತನೆ ನಡೆಯಬೇಕಿದೆ. ನೊಳಂಬ ಸಮಾಜದ ಎಲ್ಲ ಚಟುವಟಿಕೆಗಳಿಗೆ ನನ್ನ ನಿರಂತರ ಸಹಕಾರವಿರುತ್ತದೆ ಎಂದರು.

ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಸಿಂಧಿಗೆರೆ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನೊಳಂಬ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಡಾ. ಎಸ್.ಎನ್.ಉಮೇಶ್, ತಾಲೂಕು ನೊಳಂಬ ಉಪಸಮಿತಿ ಅಧ್ಯಕ್ಷ ಯತಿರಾಜ್ ಮಾತನಾಡಿದರು.

ಪಟ್ಟಣದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಗುರುಸಿದ್ದರಾಮೇಶ್ವರ ಸಮುದಾಯ ಭವನ ನಿರ್ವಣಕ್ಕೆ ಶಾಸಕ ಬೆಳ್ಳಿಪ್ರಕಾಶ್ ಭೂಮಿ ಪೂಜೆ ನೆರವೇರಿಸಿದರು. ಎಸ್​ಎಸ್​ಎಲ್​ಸಿ, ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಮತ್ತು ನಿವೃತ್ತ ನೌಕರರನ್ನು ಗೌರವಿಸಲಾಯಿತು.