ಹುಕ್ಕೇರಿ: ಪಟ್ಟಣದ ಶ್ರೀ ಗುರುಶಾಂತೇಶ್ವರ ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ ರಥೋತ್ಸವ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ರುದ್ರಾಭಿಷೇಕ, ವಟುಗಳಿಗೆ ಅಯ್ಯಾಚಾರ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತೊಟ್ಟಿಲೋತ್ಸವ, ಸಂಜೆ ಹಿರೇಮಠದಿಂದ ಗುರುಶಾಂತೇಶ್ವರ ರಥೋತ್ಸವ, ವಿವಿಧ ವಾದ್ಯಮೇಳ, ಪ್ರಮುಖ ಬೀದಿಗಳಲ್ಲಿ ಎಲ್ಲ ದೇವರ ಪಲ್ಲಕ್ಕಿ ಮತ್ತು ನಂದಿಕೋಲುಗಳು ಸಹಿತ ಗಜರಾಜನ ಮೆರವಣಿಗೆ ಜರುಗಿತು.
ಬಳಿಕ ರಥೋತ್ಸವಕ್ಕೆ ವಿರಕ್ತಮಠದ ಶಿವಬಸವ ಸ್ವಾಮೀಜಿ ಹಾಗೂ ಯರನಾಳ ಕಾಳಿಕಾದೇವಿ ಮಠದ ಬ್ರಹ್ಮಾನಂದ ಅಜ್ಜನವರು ಚಾಲನೆ ನೀಡಿದರು. ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಮಹಾಂತೇಶ ಆರಾದ್ರಿಮಠ ಮಾತನಾಡಿದರು. ಗೋಕಾಕ ಯೋಗಗುರು ಬ್ರಹ್ಮಾನಂದ ಸ್ವಾಮೀಜಿ, ವಿರೂಪಾಕ್ಷಲಿಂಗ ಶಿವಾಚಾರ್ಯ ವೈದಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಸಂಪತಕುಮಾರ ಶಾಸ್ತ್ರೀ, ನಿಶಾಂತ ಸ್ವಾಮಿ, ಉದಯ ಕೋರಿಮಠ, ಮಹಾಂತೇಶ ಹಿರೇಮಠ, ಎಚ್.ಎಲ್.ಪೂಜೇರಿ, ಚನ್ನಪ್ಪ ಗಜಬರ, ಸುಭಾಸ ನಾಯಿಕ, ಮಲ್ಲಪ್ಪ ಪಟ್ಟಣಶೆಟ್ಟಿ, ಸುರೇಶ ಜಿನರಾಳಿ ಇತರರಿದ್ದರು.
ಶತಮಾನಗಳ ಇತಿಹಾಸ ಹೊಂದಿರುವ ಗುರುಶಾಂತೇಶ್ವರ ಹಿರೇಮಠದ ಭವ್ಯ ಪರಂಪರೆಯನ್ನು ಯುವ ಜನಾಂಗಕ್ಕೆ ತಿಳಿಸಲು ಸಂಪ್ರದಾಯ ಬದ್ಧವಾಗಿ ರಥೋತ್ಸವ ಆಚರಿಸುತ್ತಿದ್ದೇವೆ. ಹತ್ತು ದಿನಗಳಿಂದ ಗುರುಶಾಂತೇಶ್ವರ ಹಿರೇಮಠದಲ್ಲಿ ನಿತ್ಯ ವಿಶೇಷ ಪೂಜೆ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿವೆ. ಭಕ್ತರು ಮಠದ ಶಿಷ್ಯ ಬಳಗ ಗುರುವಿನ ರಥ ಎಳೆದಿದ್ದು, ಮನಸ್ಸಿಗೆ ಖುಷಿ ಉಂಟುಮಾಡಿದೆ. | ಚಂದ್ರಶೇಖರ ಶಿವಾಚಾರ್ಯರು ಹುಕ್ಕೇರಿ ಹಿರೇಮಠ