ಜಿಲ್ಲೆ

ಗುರುವಿಲ್ಲದ ಶಿಷ್ಯ ಬೇರಿಲ್ಲದ ಗಿಡದಂತೆ

ಕಲಬುರಗಿ: ಜ್ಞಾನ ದೇಗುಲದ ಜೀವಂತ ದೈವವೇ ವಿದ್ಯಾರ್ಥಿಗಳಾಗಿದ್ದಾರೆ. ಇವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಶಿಕ್ಷಕರೇ ಅರ್ಚಕರಾಗಿದ್ದಾರೆ ಎಂದು ಚಂದ್ರಕಾಂತ ಪಾಟೀಲ್ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಆರ್.ಕೃಷ್ಣಮೂರ್ತಿ ಹೇಳಿದರು.

ಇಲ್ಲಿನ ಸೇಡಂ ರಸ್ತೆಯ ಚಂದ್ರಕಾಂತ ಪಾಟೀಲ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, `ಬಾಲಕ, ಪಾಲಕ, ಶಿಕ್ಷಕ' ತ್ರಿವೇಣಿಯ ಸಂಗಮವೇ ಶಿಕ್ಷಣವಾಗಿದೆ. ಇಂದಿನ ವಿದ್ಯಾರ್ಥಿಗಳ ಪಾಂಡಿತ್ಯಕ್ಕೆ ತಕ್ಕ ರೀತಿಯ ಶಿಕ್ಷಣ ಅಗತ್ಯವಾಗಿದೆ. ಆಧುನಿಕತೆಯ ಬಿರುಗಾಳಿಯಿಂದಾಗಿ ಸಾಂಪ್ರದಾಯಿಕ ಕಲಿಕೆಗೆ ಕುತ್ತು ಬಂದಿದೆ. ಹೀಗಾಗಿ ಶಿಕ್ಷಕರು ವೈಜ್ಞಾನಿಕ ರೀತಿಯ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಕ ಜ್ಞಾನದ ಕಡಲಾಗಿ, ಉತ್ಸಾಹದ ಚಿಲುಮೆಯಾಗಿ, ನಿತ್ಯ ಹೊಸತನ ಕಲಿಸುವ ಛಲವುಳ್ಳವರಾಗಬೇಕು. ಗುರುವಿಲ್ಲದ ಶಿಷ್ಯ, ಬೇರಿಲ್ಲದ ಗಿಡದಂತೆ. ಶಿಷ್ಯನಿಲ್ಲದ ಗುರು ಹಣ್ಣಿಲ್ಲದ ಮರದಂತೆ.ಹೀಗಾಗಿ ಗುರು-ಶಿಷ್ಯರ ಸಂಬಂಧ ಅವಿನಾಭಾವದಿಂದ ಕೂಡಿದ್ದಾಗಿದೆ. ಮಕ್ಕಳು ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ತಿಳಿಸಿದರು.

ಪ್ರಮುಖರಾದ ಬಸವಂತಗೌಡ ಪಾಟೀಲ್, ಶಿವಾನಂದ ಪಾಟೀಲ್, ಸದಾಶಿವ ತಡಕಲ್, ಶಶಿಭೂಷಣ ಹಿರೇಮಠ, ಶಂಕ್ರಯ್ಯ ಸ್ವಾಮಿ, ಮಲ್ಲಿನಾಥ ಬಿರಾದಾರ, ವಿಕಾಸ ಗಡಾಳೆ, ರಾಜಲಕ್ಷ್ಮೀ, ಅಶ್ವಿನಿ ನಾಯಕ, ವೇದಶ್ರೀ ಜೋಶಿ ಇತರರಿದ್ದರು. ಶಿಕ್ಷಕರಿಗಾಗಿ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಡೀ ದಿನ ವಿದ್ಯಾರ್ಥಿಗಳೇ ಬೋಧನೆ ಮಾಡಿ ಗಮನ ಸೆಳೆದರು.