ರಾಯಚೂರು: ಗುರು, ಶಿಷ್ಯರ ಸಂಬಂಧ, ಬಾಂಧವ್ಯ ಮರೆಯುವಂತದ್ದಲ್ಲ. ತಾಯಿಯ ನಂತರ ಶಿಕ್ಷಣ ಕೊಟ್ಟು ಸಂಸ್ಕಾರವಂತರನ್ನಾಗಿ ಮಾಡುವ ಗುರುವಿನ ಸ್ಥಾನವನ್ನು ಮತ್ತೊಬ್ಬರು ತುಂಬಲು ಸಾಧ್ಯವಿಲ್ಲ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರು ನಮ್ಮ ಜೀವನದ ಹಾದಿಯನ್ನು ತೋರಿಸುವ ಮಾರ್ಗದರ್ಶಕರಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿದೆ. ವರ್ಗಾವಣೆಗೊಂಡಿರುವ ಶಿಕ್ಷಕರು ಅತಿಥಿ ಶಿಕ್ಷಕರ ನೇಮಕವಾದ ನಂತರ ಬಿಡುಗಡೆಯಾಗುವ ಮೂಲಕ ಸಹಕರಿಸಬೇಕು. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ನಮ್ಮ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುವ ಸಾಧ್ಯತೆಯಿದೆ.
ಗ್ರಾಮಾಂತರ ಪ್ರದೇಶದಲ್ಲಿನ ಶಿಕ್ಷಕರು ವಸತಿ ಸಮಸ್ಯೆ ಎದುರಿಸುತ್ತಿರುವುದನ್ನು ಗಮನಿಸಿ ಈ ಹಿಂದೆ ಸರ್ಕಾರ ಗ್ರಾಮಗಳಲ್ಲಿ ಗುರುಭವನ ಹೆಸರಿನಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಮುಂದಾಗಿತ್ತು. ಅದರಿಂದ ಶಿಕ್ಷಕರಿಗೆ ಅನುಕೂಲವಾಗಲಿದೆ. ನಗರದಲಿ ಗುರುಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಬಸನಗೌಡ ದದ್ದಲ್ ಭರವಸೆ ನೀಡಿದರು.
ನಿವೃತ್ತ ಪ್ರಾಚಾರ್ಯ ವೆಂಕಟರಾವ್ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿ, ಶಿಕ್ಷಕರ ಮನಸ್ಸು ಆಣದವಾಗಿದ್ದಾಗ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗಲಿದೆ. ಗುರು ಕೋಪಗೊಂಡರೆ ಜನಾಂಗವೇ ನಾಶವಾಗಲಿದೆ. ಅಂತಃಶಕ್ತಿಯನು ಬಡಿದೆಬ್ಬಿಸುವ ಶಕ್ತಿ ಗುರುವಿನಲ್ಲಿ ಮಾತ್ರವಿದೆ.
ವ್ಯಕ್ತಿ ತನ್ನನ್ನು ತಾನು ಅರ್ಥೈಸಿಕೊಳ್ಳಲು ಒಬ್ಬ ಗುರು ಬೇಕು. ಎಲ್ಲ ವೃತ್ತಿಯಲ್ಲೂ ಸಮಸ್ಯೆಗಳಿವೆ. ಶಿಕ್ಷಕರು ಸಮಸ್ಯೆಗಳನ್ನು ಮೆಟ್ಟಿನಿಂತು ಬದುಕನ್ನು ಮತ್ತು ವೃತ್ತಿಯನ್ನು ಆಸ್ವಾದಿಸುವ ದಾರ್ಶನಿಕತೆಯನ್ನು ಬೆಳೆಸಿಕೊಳ್ಳಬೇಕು. ದೇಶದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಮಣ್ಣಿನಲ್ಲಿ ಎಲ್ಲ ಜ್ಞಾನಗಳು ಅಡಗಿವೆ. ಅವುಗಳನ್ನು ಹೆಕ್ಕಿ ತೆಗೆಯುವಲ್ಲಿ ನಾವು ಎಡವಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ತಲಾ ಐವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಡಿಡಿಪಿಐ ಸುರೇಶ ಹುಗ್ಗಿ, ಡಯಟ್ ಪ್ರಾಚಾರ್ಯ ಎಸ್.ಎಂ.ಹತ್ತಿ, ಜಿಲ್ಲಾ ಯೋಜನಾ ಸಮನ್ವಯಾಕಾರಿ ಆರ್.ಇಂದಿರಾ, ಬಿಇಒ ಚಂದ್ರಶೇಖರ ದೊಡ್ಡಮನಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭುಲಿಂಗ ಗದ್ದಿ ಉಪಸ್ಥಿತರಿದ್ದರು.