ನಾಲವಾರ: ಮನಸ್ಸು ಏಕಾಗ್ರತೆಯಿಂದ ಇದ್ದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ನಾಲವಾರ ಕೋರಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ನುಡಿದರು.
ಶ್ರೀ ಕೋರಿಸಿದ್ಧೇಶ್ವರ ಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಚಿಂತನಗೋಷ್ಠಿ ಹಾಗೂ ತನಾರತಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾನವ ಜನ್ಮ ಪಾವನವಾಗಲು ಗುರುವಿನ ಆಶೀರ್ವಾದ ಮುಖ್ಯ. ಕಾಮ-ಕ್ರೋದ, ಮದ-ಮತ್ಸರ ಜತೆಗೆ ಮನಸ್ಸಿನ ನಿಯಂತ್ರಣ ಮುಖ್ಯವಾಗಿದೆ. ಆಧುನಿಕ ಕಾಲದಲ್ಲಿ ಮನುಷ್ಯ ಯಾಂತ್ರಿಕ ಜೀವನಕ್ಕೆ ಅಂಟಿಕೊAಡು, ತನ್ನ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾನೆ. ಸಿಕ್ಕ ಸಮಯ ಸದುಪಯೋಗ ಪಡೆದು, ಗುರುವಿನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಕರೆ ನೀಡಿದರು.
ತೋನಸನಳ್ಳಿ (ಎಸ್)ಯ ಶ್ರೀ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ಚಟ್ನಳ್ಳಿಯ ಶ್ರೀ ವಿಶ್ವಾರಾಧ್ಯ ದೇವರು ಸಮ್ಮುಖ ವಹಿಸಿದ್ದರು. ಪ್ರಾಧ್ಯಾಪಕಿ ಜಗದೇವಿ ಕಲಶೆಟ್ಟಿ ಉಪನ್ಯಾಸ ನೀಡಿದರು. ಶ್ರೀಮಠದ ವಕ್ತಾರ ಮಹಾದೇವ ಗಂವಾರ್, ಪ್ರಮುಖರಾದ ಗೋಪಾಲ ರಾಠೋಡ್, ನಾಗರೆಡ್ಡಿ ಗೋಪಸೇನ್, ಶಿವರೆಡ್ಡಿ ಕುಲಕುಂದಿ, ಲಿಂಗನಗೌಡ ಕೊಲ್ಲೂರ, ಬಸವರಾಜ ಪಾಟೀಲ್ ಬಿರಾಳ, ವಿರೂಪಾಕ್ಷಯ್ಯ ಸ್ವಾಮಿ ಇತರರಿದ್ದರು.