ಜಿಲ್ಲೆ

ಗುರುಪ್ರಸಾದ್ ಬದುಕು ಯುವಕರಿಗೆ ಮಾದರಿ

ಬೀದರ್: ಡಾ.ಡಿ.ವಿ. ಗುರುಪ್ರಸಾದ್ ಪ್ರಾಮಾಣಿಕ ಮತ್ತು ವೃತ್ತಿಪರ ಜೀವನಕ್ಕೆ ಒತ್ತು ಕೊಟ್ಟವರು. ತನ್ನೊಂದಿಗೆ ಮತ್ತೊಬ್ಬರು ಸಹ ಈ ಹಾದಿಯಲ್ಲಿ ನಡೆಯುವಂತೆ ಪ್ರೇರಣೆ ನೀಡಿದವರು. ಅವರ ಬದುಕು ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದಕರ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೈಗೆ ಬಂದ ತುತ್ತು ಪುಸ್ತಕದ ಮೂರನೇ ಆವತ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಓದು ಇಲ್ಲದೆ ವ್ಯಕ್ತಿತ್ವ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪೊಲೀಸರು ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕು. ಒತ್ತಡದ ನಡುವೆಯೂ ಸಮಯ ಪಾಲನೆ ಮಾಡಬೇಕು. ಅಂದಾಗಲೇ ಉತ್ತಮ ಅಧಿಕಾರಿಯಾಗಲು ಸಾಧ್ಯ. ಗುರುಪ್ರಸಾದ್ ಪ್ರಾಮಾಣಿಕ ಅಧಿಕಾರಿಯಾಗಿ ಕೆಲಸ ಮಾಡಿದವರು. ದಕ್ಷತೆಯಿಂದ ಕೆಲಸ ಮಾಡಿದ ಅವರು ವೃತ್ತಿ ಜೀವನದ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಎಲ್ಲರೂ ಓದಬೇಕು ಎಂದು ಕೋರಿದರು.
ವಿಜಯವಾಣಿ ಅಂಕಣಕಾರ, ಕೃತಿಕಾರರೂ ಆದ ನಿವೃತ್ತ ಡಿಜಿಪಿ ಡಾ.ಡಿ.ವಿ. ಗುರುಪ್ರಸಾದ್ ಮಾತನಾಡಿ, ಕೈಗೆ ಬಂದ ತುತ್ತು (ಆತ್ಮ ಕತೆ) ಕೃತಿ ನನ್ನ ಪೊಲೀಸ್ ವೃತ್ತಿ ಜೀವನದ ಸಾಧನೆಗಳ ಪಟ್ಟಿಯಲ್ಲ, ಇದು ಎಲ್ಲಿ ಸೋತಿದ್ದೇನೆ ಎಂಬುದರ ನಿರೂಪಣೆಯಾಗಿದೆ ಎಂದು ಹೇಳಿದರು.
ವೃತ್ತಿ ಬದುಕಿನಲ್ಲಿ ಆಗಿರುವ ಸೋಲುಗಳನ್ನು ಬರಹಕ್ಕೆ ಇಳಿಸಿದ್ದೇನೆ. ಬೀದರ್ ನಲ್ಲಿ ಎಸ್ಪಿ ಆಗಿದ್ದಾಗ ಅಂಬೇಡ್ಕರ್ ಜಯಂತ್ಯುತ್ಸವ ವೇಳೆ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಒಬ್ಬನ ಹತ್ಯೆಯಾಗಿತ್ತು. ಆಗ ನಾನು ಸರಿಯಾಗಿ ಕರ್ತವ್ಯ ನಿಭಾಯಿಸಲಿಲ್ಲ, ಸೇವೆಯ ಮೊದಲ ಜಿಲ್ಲೆಯಲ್ಲೇ ಸೋಲು ಕಂಡೆ. ಎಲ್ಲ ವರ್ಗದ ಜನರೊಂದಿಗೆ ಸರಿಯಾಗಿ ಬೆರೆಯದಿರುವುದು ಇದಕ್ಕೆ ಕಾರಣ ಎಂದು ಪುಸ್ತಕದಲ್ಲಿ ಕಹಿ ಅನುಭವ ಸಹ ಹಂಚಿಕೊಂಡಿರುವೆ ಎಂದರು.
ನಾನು ಕಲಬುರಗಿ ಡಿಐಜಿ ಆಗಿದ್ದಾಗ ಬೀದರಿನ ದೀಪಕ ಚಿತ್ರಮಂದಿರದಲ್ಲಿ ನಡೆದ ಬಾಂಬ್ ಸೋಟ ನನಗೆ ಇಂದಿಗೂ ಕಾಡುತ್ತದೆ. ಬೀದರ್ಗೆ ದಿ.ರಾಜೀವ್ ಗಾಂಧಿ ಭೇಟಿ ವೇಳೆ ನಾನು ಇಲ್ಲಿ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದೆ. ಆದರೆ ಇಲ್ಲಿನ ಕಾರ್ಯಕ್ರಮದ ನಂತರ ವಾರದಲ್ಲೇ ಅವರು ಬಾಂಬ್ ಸೋಟದಲ್ಲಿ ಹತ್ಯೆಯಾಗಿರುವುದು ಸದಾ ನೋವುಂಟು ಮಾಡುತ್ತದೆ ಎಂದು ಹೇಳಿದರು.
ನಿವೃತ್ತ ಡಿಐಜಿಪಿ ಡಾ.ಡಿ.ಸಿ. ರಾಜಪ್ಪ ಮಾತನಾಡಿದರು. ಪುಸ್ತಕದ ಪರಿಚಯವನ್ನು ಪ್ರಾಧ್ಯಾಪಕ ಶಿವಕುಮಾರ ಕಟ್ಟೆ ಮಾಡಿದರು. ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಡಿ.ನಾರಾಯಣ ಇತರರಿದ್ದರು. ಎಸ್ಪಿ ಚನ್ನಬಸವಣ್ಣ ಲಂಗೋಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಣೆ ಮಾಡಿದರು. ಎಎಸ್ಐ ಹಂಶಕವಿ ವಂದಿಸಿದರು.