ಜಿಲ್ಲೆ

ಗುರುತಿಸಲಾದ ಗ್ರಾಮಗಳಲ್ಲಿ ಕಾಮಗಾರಿ ಕೈಗೊಳ್ಳಿ

ಬಾಗಲಕೋಟೆ: ಕ್ರೀಯಾ ಯೋಜನೆಯಲ್ಲಿ ಗುರುತಿಸಲಾದ ಸಮಸ್ಯಾತ್ಮಕ ಗ್ರಾಮಗಳಲ್ಲಿ ಮಾತ್ರ ಕಾಮಗಾರಿಗಳನ್ನು ಕೈಗೊಳ್ಳತಕ್ಕದ್ದು. ಆ ಗ್ರಾಮ ಬಿಟ್ಟು ಬೇರೆಡೆ ಕಾಮಗಾರಿ ಕೈಗೊಂಡಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಬರ ಪರಿಸ್ಥಿತಿ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಪ್ರತಿ ತಾಲೂಕಿಗೆ ಪ್ರಥಮ ಹಂತದಲ್ಲಿ ೨೦ ಲಕ್ಷ ರೂ. ಹಾಗೂ ಎರಡನೇ ಹಂತದಲ್ಲಿ ೨೦ ಲಕ್ಷ ರೂ ಸೇರಿ ಒಟ್ಟು ೪೦ ಲಕ್ಷ ರೂಗಳ ಅನುದಾನ ನೀಡಲಾಗಿದೆ. ಈಗಾಗಲೇ ಅನುಮೋದನೆಗೊಂಡ ಕ್ರೀಯಾಯೋಜನೆಯಲ್ಲಿ ತಿಳಿಸಿದ ಸಮಸ್ಯಾತ್ಮಕ ಗ್ರಾಮಗಳಲ್ಲಿ ಮಾತ್ರ ಕಾಮಗಾರಿಗಳನ್ನು ಕೈಗೊಳ್ಳಲು ತಿಳಿಸಿದರು.

ಕ್ರೀಯಾ ಯೋಜನೆಯ ಪ್ರಕಾರ ಪ್ಲಷಿಂಗ್, ರೀಡ್ರಿಲಿಂಗ್, ಪೈಪಲೈನ್ ದುರಸ್ಥಿ ಕಾರ್ಯಗಳಿಗೆ ಅನುಮೋದನೆ ನೀಡಲಾಗಿದ್ದು, ಅನುದಾನ ಸಹ ಒದಗಿಸಲಾಗಿದೆ. ಇನ್ನು ಮೂರನೇ ಹಂತದಲ್ಲಿ ಪ್ರತಿ ತಾಲೂಕಿಗೆ ೧೪ ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಎಪ್ರೀಲ್ ಮಾಹೆಯಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು ಮುಂದಿನ ಮೇ ಮಾಹೆಯ ಕ್ರೀಯಾ ಯೋಜನೆಯನ್ನು ಮುಂಚಿತವಾಗಿ ರೂಪಿಸಲು ತಿಳಿಸಿದರು. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕಾ ಟಾಸ್ಕಪೋರ್ಸ ಸಮಿತಿಯ ಅಧ್ಯಕ್ಷರನ್ನಾಗಿ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಿದ್ದು, ಅವರಿಂದ ಅನುಮೋದನೆ ಪಡೆದುಕೊಳ್ಳತಕ್ಕದ್ದು ಎಂದು ತಿಳಿಸಿದರು.

ಪ್ರತಿ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಕೈಗೊಂಡ ಕಾಮಗಾರಿ ಹಾಗೂ ದೂರವಾಣಿ ಮೂಲಕ ಕರೆ ಬಂದ ದೂರುಗಳಿಗೆ ಕೈಗೊಂಡ ಕ್ರಮ ಹಾಗೂ ಪತ್ರಿಕೆಯಲ್ಲಿ ಬಂದ ವರದಿಗಳಿಗೂ ಸ್ಪಂಧಿಸಿದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಸಮಸ್ಯೆ ಬಂದಲ್ಲಿ ೨೪ ಗಂಟೆಯೊಳಗೆ ನೀರು ಪೂರೈಸುವ ಕಾರ್ಯವಾಗಬೇಕು. ಟ್ಯಾಂಕರ್ ಮೂಲಕ ನೀರು ಪೂರೈಕೆಯ ಮಾಡುವುದನ್ನು ಬಿಟ್ಟು ಖಾಸಗಿ ಬೋರವೆಲ್ ಮೂಲಕ ಇಲ್ಲವೇ ಶಾಶ್ವತವಾಗಿ ನೀರು ಕೊಡುವ ಕೆಲಸವಾಗಬೇಕು ಎಂದು ತಿಳಿಸಿದರು.


ಬರ ಕಾಮಗಾರಿ ಪರಿಶೀಲನೆಗೆ ತಂಡ ರಚನೆ:

ಬರ ಪರಿಸ್ಥಿತಿ ನಿರ್ವಹಣೆ ಹಿನ್ನಲೆಯಲ್ಲಿ ಈಗಾಗಲೇ ಅನುಮೋದನೆಗೊಂಡ ಕ್ರೀಯಾ ಯೋಜನೆ ಪ್ರಕಾರ ಕೈಗೊಂಡ ಕಾಮಗಾರಿಗಳ ಪರಿಶೀಲನೆಗೆ ತಾಲೂಕಾವಾರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಪರಿಶೀಲನಾ ತಂಡವನ್ನು ರಚಿಸಲಾಗುತ್ತಿದ್ದು, ಕಾಮಗಾರಿ ಪರಿಶೀಲನೆಗೆ ತಾಲೂಕಾ ವ್ಯಾಪ್ತಿಯಲ್ಲಿ ಪರಿಶೀಲನೆ ಕೈಗೊಳ್ಳಲಿದ್ದಾರೆ. ಕಾಮಗಾರಿ ಆಗದೇ ಇದ್ದಲ್ಲಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತಿನ ಕ್ರಮಜರುಗಿಸಲಾಗುವುದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಧಿಕಾರಿ ಪುರೋಹಿತ, ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.