ಹನೂರು: ನಿರ್ದಿಷ್ಟ ಗುರಿಯನ್ನು ಹೊಂದಿ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಶೈಕ್ಷಣಿಕವಾಗಿ ಸಾಧನೆ ಮಾಡಬಹುದು ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಭಾಗದಲ್ಲಿ ಶಿಕ್ಷಣ ನೀಡುವಲ್ಲಿ ಕೈಸ್ತ ಮಿಷನರಿಗಳ ಪಾತ್ರ ಅಪಾರ. ಈ ದಿಸೆಯಲ್ಲಿ ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುವಲ್ಲಿ ಹೆಚ್ಚಿನ ಒತ್ತು ನೀಡುತ್ತಿರುವುದು ಮೆಚ್ಚುಗೆ ಸಂಗತಿ. ಕಲಿಕೆ ಎನ್ನುವುದು ಮನೆಯಲ್ಲಿಯೇ ಆರಂಭವಾಗುತ್ತದೆ. ಆದರೆ, ಗುರುಗಳ ಮಾರ್ಗದರ್ಶನವಿದ್ದಲ್ಲಿ ನಿರ್ದಿಷ್ಟ ಗುರಿ ಸಾಧಿಸುವುದರ ಮೂಲಕ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇಂದಿನ ಯುಗವು ಸ್ಪರ್ಧಾತ್ಮಕವಾಗಿದ್ದು, ಉದ್ಯೋಗ ಪಡೆದುಕೊಳ್ಳಬೇಕಾದರೆ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಮೊರೆ ಹೋಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಇದು ಕಲಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಮೈಸೂರು ಎಂಡಿಎಎಸ್‌ನ ಕಾರ್ಯದರ್ಶಿ ಫಾದರ್ ಎಡ್ವರ್ಡ್ ವಿಲಿಯಂ ಮಾತನಾಡಿ, ಇಂದಿಗ ಯುಗದಲ್ಲಿ ಯುವ ಪೀಳಿಗೆ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಾಗದೆ ಮೋಜು, ಮಸ್ತಿಯಲ್ಲಿ ತೊಡಗಿದೆ. ಇದು ಉತ್ತಮ ಸಂಸ್ಕಾರಕ್ಕೆ ಮಾರಕ. ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಂಡಿಇಎಸ್ ಅಧ್ಯಕ್ಷ ಫಾದರ್ ಡಾ.ಬರ್ನಾಡ್ ಮೋರಸ್, ಖಜಾಂಚಿ ಫಾ. ನವೀನ್‌ಕುಮಾರ್, ಕ್ರಿಸ್ತರಾಜ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ಫಾ.ರೋಷನ್, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಬಿಇಒ ಗುರುಲಿಂಗಯ್ಯ, ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಸದಸ್ಯರಾದ ಸೋಮಶೇಖರ್, ಶಿಕ್ಷಕರು ಇದ್ದರು.