ಎನ್.ಆರ್.ಪುರದಲ್ಲಿ ಕಸಾಪದಿಂದ ಶಿಕ್ಷಕಿ ಶರಾವತಿ ದಿನೇಶ್‌ಗೆ ಅಕ್ಷರದವ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೌಸ್ತುಭ, ಕಲಾವತಿ, ಲೀಲಾವತಿ ಉಪಾಧ್ಯಾಯ ಇತರರಿದ್ದರು. 
ಜಿಲ್ಲೆ

ಗುರುಕುಲ ಶಿಕ್ಷಣದಲ್ಲಿತ್ತು ಪಾರಂಪರಿಕ ಮೌಲ್ಯ

ಶೃಂಗೇರಿ: ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಗುರುಕುಲ ಪದ್ಧತಿಯಲ್ಲಿ ಗುರು-ಶಿಷ್ಯರ ಸಂಬಂಧ ಸಾಕ್ಷಾತ್ಕರಿಸಿತ್ತು. ಶಿಕ್ಷಣಕ್ಕಾಗಿ ಜ್ಞಾನ ಸೀಮಿತವಾಗಿರದೆ ಪಾರಂಪರಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಗುರುಕುಲ ಪದ್ಧತಿ ಅಗ್ರಸ್ಥಾನದಲ್ಲಿತ್ತು ಎಂದು ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ತಿಳಿಸಿದರು.

ತಾಲೂಕು ಕಸಾಪ ಮಹಿಳಾ ಘಟಕ ಕನ್ನಡ ಭವನದಲ್ಲಿ ಗುರುವಾರ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಆಯೋಜಿಸಿದ್ದ ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಅಂದಿನ ಶಿಕ್ಷಣ ಯಾರನ್ನೂ ಅವಲಂಬಿಸದೆ ಸಂಪೂರ್ಣ ಸ್ವತಂತ್ರವಾಗಿತ್ತು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗಿದೆ. ಶಿಕ್ಷಣದ ಜತೆಗೆ ಮಕ್ಕಳಿಗೆ ನೀತಿಪಾಠ, ಇತಿಹಾಸ, ಸಂಸ್ಕೃತಿ, ಸಂಸ್ಕಾರಗಳನ್ನು ಹೇಳಿಕೊಡುವುದು ಅನಿವಾರ್ಯವಾಗಿದೆ. ಕೇವಲ ಅಂಕ ಗಳಿಸಿ ಉದ್ಯೋಗ ಪಡೆಯುವುದೇ ಶಿಕ್ಷಣದ ಗುರಿಯಾಗಬಾರದು. ಶಿಕ್ಷಣ ವಿದ್ಯಾರ್ಥಿಗಳ ಅಂತರಾತ್ಮದಲ್ಲಿ ಪ್ರಜ್ಞಾನ ಬೆಳೆಸುವಲ್ಲಿ ಪೂರಕವಾಗಿರಬೇಕು. ಆಗ ಮಾತ್ರ ಮಕ್ಕಳು ಸಮಾಜದ ಸುಸಂಸ್ಕೃತ ಸತ್ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಆರ್.ಗಂಗಾಧರಪ್ಪ ಮಾತನಾಡಿ, ಆಧುನಿಕ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿ ಪ್ರಪಂಚದ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿದೆ. ವಿಮರ್ಶಾತ್ಮಕ ಚಿಂತನೆಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.

ಶಿಕ್ಷಕಿಯರಾದ ಲೀಲಾ ಉಪಾಧ್ಯಾಯ ನೇರಳಕೊಡಿಗೆ, ಹೊಳೆಕೊಪ್ಪ ಶರಾವತಿ ದಿನೇಶ್ ಅವರಿಗೆ ಅಕ್ಷರದವ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಸುನೀತಾ ನವೀನ್ ಗೌಡ, ಪದಾಧಿಕಾರಿಗಳಾದ ನೇತ್ರಾವತಿ, ಪ್ರಮೀಳಾ ರಮೇಶ್, ಕವಿತಾ ಬಾಪಟ್, ಸುಜಾತಾ, ಸುಮಿತ್ರಾ ಇದ್ದರು.