ಜಿಲ್ಲೆ

ಗುರು ಸಾರ್ವಭೌಮರ ಆರಾಧನೆ

ಬಾಗಲಕೋಟೆ: ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದ್ದು, ಜಿಲ್ಲೆಯಾದ್ಯಂತರ ನಾನಾ ರಾಯರ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ಸಡಗರದಿಂದ ಜರುಗುತ್ತಿವೆ.

ಪ್ರತಿದಿನ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಅರ್ಚನೆ, ಪಾದಪೂಜೆ, ಕನಕಾಭಿಷೇಕ, ನೈವೇದ್ಯ, ಅಲಂಕಾರ ಪೂಜೆ, ಹಸ್ತೋಧಕ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನಡೆಯುತ್ತೀವೆ. ಸಂಜೆ ಭಜನೆ, ಸಂಗೀತ, ಸ್ವಸ್ತಿ ವಾಚನ, ಮಹಾಮಂಗಳಾರತಿ ಜೊತೆಗೆ ಆರಾಧನೆ ಅಂಗವಾಗಿ ಗುರು ರಾಯರ ವೃಂದಾವನ ವಿಶೇಷ ಅಲಂಕಾರ ಆಕರ್ಷಿಸುತ್ತೀವೆ.

ನಗರದ ವಿದ್ಯಾಗಿರಿ ಬಡಾವಣೆಯ ವಿಪ್ರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ರಾಯರ ಮಠದಲ್ಲಿ, ಕಿಲ್ಲಾಗಲ್ಲಿಯಲ್ಲಿರುವ ನಂಜನಗೂಡು ಶಾಖಾ ಮಠ ಹಾಗೂ ನಾಗಸಂಪಗಿ ಅವರ ಮಠದಲ್ಲಿ ರಾಘವೇಂದ್ರ ಸ್ವಾಮಿಗಳವರ ಆರಾಧನೆ ಚಾಲನೆ ನೀಡಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರವಚನಗಳೊಂದಿಗೆ ಧಾರ್ಮಿಕ ಚಿಂತನೆಗಳನ್ನು ಬಿತ್ತಲಾಗುತ್ತಿದೆ.

ಬಾಗಲಕೋಟೆ ನಗರದ ಅಷ್ಟೆ ಅಲ್ಲದೆ ಜಮಖಂಡಿ, ಹುನ್ನೂರ, ಹುನಗುಂದ, ಕಮತಗಿ, ಇಳಕಲ್ಲ, ಕೂಡಲಸಂಗಮ, ಬೀಳಗಿ, ಗಲಗಲಿ,ಮಹಾಲಿಂಗಪೂರ, ರಬಕವಿ, ಬನಹಟ್ಟಿ, ಮುಧೋಳ ಸೇರಿದಂತೆ ವಿವಿಧೆಡೆ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವ ಕಳೆಗಟ್ಟಿದೆ.