ಬಾಗಲಕೋಟೆ ನಗರದ ರಾಯರಮಠದಲ್ಲಿ ಸೋಮವಾರ ಸಂಜೆ ಆರಾಧಾನೆ ನಿಮಿತ್ತ ಧಾನ್ಯಗಳ ಸಮರ್ಪಣೆ ಮಾಡಲಾಯಿತು.  
ಜಿಲ್ಲೆ

ಗುರು ರಾಯರ ೩೫೩ ನೇ ಆರಾಧನಾ ಮಹೋತ್ಸವ

ಬಾಗಲಕೋಟೆ: ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವ ಆ.೨೦ ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ತನ್ನ ನಿಮಿತ್ತ ಜಿಲ್ಲೆಯ ವಿವಿಧೆಡೆ ರಾಯರ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಆರಾಧನಾ ಮಹೋತ್ಸವದ ಅಂಗವಾಗಿ ಸೋಮವಾರ ನಗರದ ಕಿಲ್ಲೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ಧರ್ಮ ಧ್ವಜಾರೋಹಣ, ಗೋಪೂಜೆ, ಭಕ್ತರು ಉತ್ಸವಕ್ಕಾಗಿ ನೀಡಿದ ದವಸ ಧಾನ್ಯದ ಪೂಜೆ, ಲಕ್ಷ್ಮೀ ಪೂಜೆ, ಪ್ರಾರ್ಥನೋತ್ಸವ ಕಾರ್ಯಕ್ರಮಗಳು ಜರುಗಿದವು.

ಆ.೨೦, ೨೧ ಹಾಗೂ ೨೨ ರಂದು ಪ್ರತಿನಿತ್ಯ ನಸುಕಿನ ಜಾವ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ೭ ಗಂಟೆಗೆ ಅಷ್ಟೋತ್ತರ ಪಾರಾಯಣ, ೮ ಗಂಟೆಗೆ ಪಂಚಾಮೃತ ಅಭಿಷೇಕ, ೧೦ ಗಂಟೆಗೆ ಅರ್ಚನೆ, ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ನೈವೇದ್ಯ, ಅಲಂಕಾರ ಪೂಜೆ, ಹಸ್ತೋಧಕ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನೆರವೇರಲಿದೆ. ಸಂಜೆ ಭಜನೆ, ಸಂಗೀತ, ಸ್ವಸ್ತಿ ವಾಚನ, ಮಹಾಮಂಗಳಾರತಿ ನಡೆಯಲಿದೆ. ಪ್ರತಿ ದಿನ ಸಂಜೆ ಸುಗಮ ಸಂಗೀತ, ದಾಸವಾಣಿ, ಭರನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಗಾಯನ ಕಾರ್ಯಕ್ರಮ ನಡೆಯಲಿದೆ.

ವಿಪ್ರ ರಾಯರಮಠ:
ನಗರದ ವಿದ್ಯಾಗಿರಿ ಬಡಾವಣೆಯ ವಿಪ್ರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ರಾಘವೇಂದ್ರ ಸ್ವಾಮಿಗಳವರ ಆರಾಧನೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ೬ ಗಂಟೆಗೆ ನಿರ್ಮಲ್ಯ ವಿಸರ್ಜನೆ, ೭ ಗಂಟೆಗೆ ಪಂಚಾಮೃತ ಅಭಿಷೇಕ, ೯ ಗಂಟೆಗೆ ಸಾಮೂಹಿಕ ಅಷ್ಟೋತ್ತರ, ಮಹಾಪೂಜೆ, ಮಧ್ಯಾಹ್ನ ೧ ಗಂಟೆಗೆ ಮಹಾನೈವೇದ್ಯ, ಹಸ್ತೋದಕ, ತೀರ್ಥಪ್ರಸಾದ, ಸಂಜೆ ೬ ಗಂಟೆಗೆ ಪಾಲಕಿ ಸೇವೆ ಜರುಗಲಿದೆ. ಆ.೨೦ ರಂದು ಸಂಜೆ ೫ ಗಂಟೆಗೆ ರುಕ್ಮಿಣಿ ಭಜನಾ ಮಂಡಳಿಯಿಂದ ಭಜನೆ, ೭ ಗಂಟೆಗೆ ಸಂತೋಷ ಗದ್ದನಕೇರಿ ಅವರಿಂದ ದಾಸವಾಣಿ, ಆ.೨೧ ರಂದು ೭ ಗಂಟೆಗೆ ಪರಿಮಳಾ ಗಿರಿಯಾಚಾರ್ಯ ಅವರಿಂದ ದಾಸವಾಣಿ ಆ.೨೧ ರಂದು ಸಂಜೆ ೬.೩೦ ಗಂಟೆಗೆ ಪ್ರತಿಭಾ ಪುರಸ್ಕಾರ, ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ನಡೆಯಲಿದ್ದು, ಹೃದಯ ರೋಗ ತಜ್ಞ ಡಾ.ಸಂಮೀರ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ಇನ್ನು ಜಿಲ್ಲೆಯಾದ್ಯಂತರ ನಾನಾ ರಾಯರಮಠದಲ್ಲಿ ಆ.೨೦ ರಂದು ಪೂರ್ವಾರಾಧನೆ, ಆ.೨೧ ರಂದು ಮಧ್ಯಾರಾಧನೆ, ಆ.೨೨ ರಂದು ಉತ್ತರಾಧನೆ ನಡೆಯಲಿದ್ದು, ಅಂದು ರಥೋತ್ಸವ ನಡೆಯುತ್ತದೆ. ರಾಂಪುರ ಪು.ಕೇ.,ಹುನಗುಂದ, ಕಮತಗಿ, ಇಳಕಲ್ಲ, ಕೂಡಲಸಂಗಮ, ಬೀಳಗಿ, ಗಲಗಲಿ, ಮುಧೋಳ, ಮಹಾಲಿಂಗಪೂರ, ರಬಕವಿ, ಬನಹಟ್ಟಿ, ಜಮಖಂಡಿ, ಹುನ್ನೂರ ಸೇರಿದಂತೆ ವಿವಿಧೆಡೆ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವ ಜರುಗಲಿದೆ.