ಜಿಲ್ಲೆ

ಗುರು ಪರಂಪರೆಯಿಂದ ಜ್ಞಾನ ಕೋಶ ವೃದ್ಧಿ: ಬಿ.ಆರ್. ಶಂಕರಾನಂದ್ ಹೇಳಿಕೆ

ಹರೀಶ್​​ ಕೆ.ಸಿ.

ಬೆಂಗಳೂರು: ಗುರು ಪರಂಪರೆ ಇಲ್ಲದಿದ್ದಲ್ಲಿ ಜ್ಞಾನ ಕೋಶ ಖಾಲಿಯಾಗುತ್ತಿತ್ತು ಎಂದು ಭಾರತೀಯ ಶಿಕ್ಷಣ ಮಂಡಳಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ್ ಹೇಳಿದ್ದಾರೆ.

ಭಾರತೀಯ ಶಿಕ್ಷಣ ಮಂಡಳಿಯ ಕರ್ನಾಟಕ ದಕ್ಷಿಣ ಶಾಖೆ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಗುರು ವಂದನಾ ಕಾರ್ಯಕ್ರಮ’ದಲ್ಲಿ ಮಾತನಾಡಿದರು. ದೇಶದ ಭವಿಷ್ಯ ರೂಪಿಸಲು ಗುರುಗಳು ಪ್ರೇರಣೆ. ಮಹತ್ವದ ಸುಧಾರಣೆಗೆ ಕಾರಣರಾಗಿದ್ದಾರೆ. ಗುರು ಪರಂಪರೆ ಇಲ್ಲವಾಗಿದ್ದಲ್ಲಿ ಜ್ಞಾನದ ಕೋಶ ಖಾಲಿ ಇರುತ್ತಿತ್ತು. ಪ್ರತಿಯೊಂದು ಬೆಳವಣಿಗೆಗೆ ಗುರುಗಳ ಕೊಡುಗೆ ಅನನ್ಯ ಎಂದರು.

ಭಾರತದ ಶ್ರೀಮಂತ ಗುರು-ಶಿಷ್ಯ ಪರಂಪರೆಗೆ ಗೌರವ ಸೂಚಿಸುವ ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಹಲವು ಶಿಕ್ಷಣ ತಜ್ಞರು ಮತ್ತು ವಿವಿ ಕುಲಪತಿಗಳು ಸಾಕ್ಷಿಯಾದರು. ಶಿಕ್ಷಣ ತಜ್ಞರನ್ನು ಗೌರವಿಸುವ, ಗುರು ಪೂರ್ಣಿಮೆಯ ಅನನ್ಯ ಅರ್ಥ ಉಳಿಸಿಕೊಂಡು ಬೆಳಗಿಸುವ ನಿಟ್ಟಿನಲ್ಲಿ ಹಲವು ಪ್ರಾಧ್ಯಾಪಕರು, ಶಿಕ್ಷಣ ಕ್ಷೇತ್ರದ ಸದಸ್ಯರು ಒಟ್ಟಾಗಿ ಸೇರಿದರು.

ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್.ಎಸ್. ಅಲೂರು, ಹಾಸನ ವಿವಿ ಕುಲಪತಿ ಪ್ರೊ. ಟಿ.ಸಿ. ತಾರನಾಥ್, ಭಾರತೀಯ ಶಿಕ್ಷಣ ಮಂಡಳಿಯ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಪ್ರೊ. ಸತೀಶ ವಿ. ಕೈಲಾಸ್, ಸೌಂದರ್ಯ ಎಜುಕೇಶನ್ ಟ್ರಸ್ಟ್‌ನ ಸೌಂದರ್ಯ ಪಿ.ಮಂಜಪ್ಪ ಮತ್ತಿತರರಿದ್ದರು.