ಜಿಲ್ಲೆ

ಗುರು ತೋರಿದ ದಾರಿ ತಿಂಗಳ ಮಾಮನ ತೇರು ಶತ ಪೂರ್ಣಿಮೆ ಕಾರ್ಯಕ್ರಮ


ಅರಕಲಗೂಡು: ಪಟ್ಟಣದ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ವೈಭವೋಪೇತವಾಗಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಶತ ಪೂರ್ಣಿಮೆ ಕಾರ್ಯಕ್ರಮ ಸೋಮವಾರ ಸಂಜೆ ವರ್ಣರಂಜಿತ ತೆರೆ ಕಂಡಿತು.


ಪಟ್ಟಣದಲ್ಲಿ ಮೂರು ದಿನಗಳಿಂದ ಸಡಗರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಶತ ಪೂರ್ಣಿಮೆ, ಗುರು ವಂದನಾ, ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ರಜತ ತುಲಾಭಾರ, ಪಟ್ಟಾಭಿಷೇಕ ದಶಮಾನೋತ್ಸವ, ಯುವ ಸಂಭ್ರಮ, ಬಿಜಿಎಸ್ ಬೆಳದಿಂಗಳೋತ್ಸವ ಕಾರ್ಯಕ್ರಮ ವರ್ಣ ರಂಜಿತವಾಗಿ ಮುಕ್ತಾಯ ಕಂಡಿತು.


ಮಂಗಳವಾರ ಬೆಳಗ್ಗೆ ಹಾಸನ ಆದಿ ಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳ್ಳಿ ಶಿವಪುತ್ರ ಸ್ವಾಮೀಜಿ, ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು, ವಿದ್ಯಾರ್ಥಿಗಳು ಹಾಗೂ ಮಹಿಳಾ ಒಕ್ಕಲಿಗರ ಸಂಘದವರು ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕ್ರೀಡಾಂಗಣದಲ್ಲಿ ಸ್ಥಾಪಿಸಿದ್ದ ಧ್ವಜವನ್ನು ಅವರೋಹಣ ಮಾಡಿ ಕೆಳಗಿಳಿಸುವ ಮೂಲಕ ಗೌರವ ಸಲ್ಲಿಸಿದರು. ಭಕ್ತರು ಜಗದ್ಗುರು ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಶ್ರೀಗಳ ಪಾದಪೂಜೆ ನೆರವೇರಿಸಿ ಆರತಿ ಪೂಜೆ ನಡೆಸಿ ಫಲ ತಾಂಬೂಲ ನೀಡಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.