ಜಿಲ್ಲೆ

ಗುರು ಕೃಪೆಯಿಂದ ಮುಕ್ತಿ ಸಾಧ್ಯ

ಬೀದರ್: ಗುರು ಕೃಪೆಯಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಗುರು ಪೂರ್ಣಿಮೆ ನಿಮಿತ್ತ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಭವಸಾಗರ ದಾಟಲು ಗುರುವಿನ ಅನುಗ್ರಹ ಅವಶ್ಯಕ. ಕೋಲಿನ ಆಸರೆಯಿದ್ದರೆ ಕುರುಡ ಎಲ್ಲಿಗೆ ಬೇಕಾದರೂ ಹೋಗಬಲ್ಲ. ಹಾಗೆಯೇ ಗುರುವಿನ ಮಾರ್ಗದರ್ಶದಿಂದ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.
ಮಾನವನ ಜೀವನದಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದಾಗಿದೆ. ಶಿಲ್ಪಿ ಕಲ್ಲನ್ನು ಕೆತ್ತಿ ಸುಂದರ ಮೂರ್ತಿ ಮಾಡುವಂತೆ, ಗುರು ಮನುಷ್ಯನಿಗೆ ಸಂಸ್ಕಾರ ಕೊಟ್ಟು ಜ್ಞಾನದ ಮೂರ್ತಿಯನ್ನಾಗಿಸುತ್ತಾನೆ ಎಂದು ಹೇಳಿದರು.
ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗುತ್ತದೆ. ಹರ ಮುನಿದರೂ ಗುರು ಕಾಯುವನು ಎನ್ನುವ ಮಾತು ಗುರುವಿನ ಮಹತ್ವವನ್ನು ಸಾರುತ್ತದೆ ಎಂದು ತಿಳಿಸಿದರು.
ಜೀವನ ಪಾವನ ಮಾಡಿಕೊಳ್ಳಲು ಗುರುವಿನ ವಾಣಿ ಆಲಿಸಬೇಕು. ಗುರು ತೋರುವ ಮಾರ್ಗದಲ್ಲಿ ಸಾಗಬೇಕು ಎಂದರು.
ಬೆಂಗಳೂರಿನ ನಡೆದಾಡುವ ದೇವರ ಸೇವಾ ಟ್ರಸ್ಟ್‍ನ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪುರಸ್ಕøತ ತುಮಕೂರಿನ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಅವರನ್ನು ಸನ್ಮಾನಿಸಲಾಯಿತು.
111 ಮುತ್ತೈದೆಯರಿಂದ ರಾಚೋಟೇಶ್ವರರಿಗೆ ಕುಂಭಾಭಿಷೇಕ, ಶ್ರೀಗಳ ಪಾದಪೂಜೆ, ಮಹಾ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ, ಭಕ್ತಿಯಿಂದ ನೆರವೇರಿದವು. ವಿವಿಧೆಡೆಯ ಅಪಾರ ಭಕ್ತರು ಭಾಗವಹಿಸಿದ್ದರು.