ಜಿಲ್ಲೆ

ಗುರು ಕಾರುಣ್ಯದಿಂದ ಸಮಸ್ಯೆ ದೂರ

ಬಸವರಾಜ ವೀರಪ್ಪ ಗರಗ

ಮುಂಡರಗಿ: ಗುರುವಿನ ಆಶೀರ್ವಾದ ಬಹಳಷ್ಟು ದೊಡ್ಡದು. ಗುರುವನ್ನು ಕಡೆಗಣಿಸಿ, ಗುಡಿಗೆ ಹೋದರೆ ಅರ್ಥವಿಲ್ಲ. ದೇವಸ್ಥಾನದ ದೇವರ ಮೂರ್ತಿಗೆ ಗುರುವೇ ಸಂಸ್ಕಾರ ಕೊಡುತ್ತಾನೆ. ನಮ್ಮ ಸಮಸ್ಯೆಗಳಿಗೆ ಗುರುವಿನಿಂದ ಮಾತ್ರ ಪರಿಹಾರ ಕೊಡಲು ಸಾಧ್ಯ ಎಂದು ಜಗದ್ಗುರು ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಗುರುವಾರ ಜರುಗಿದ 1832ನೇ ಮಾಸಿಕ ಶಿವಾನುಭವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಗುರುವಿನ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ. ನಾಡಿನ ಒಳಿತಿಗೆ ಶ್ರಮಿಸಿ, ಭಕ್ತರ ಏಳಿಗೆಗೆ ಸನ್ಮಾರ್ಗ ತೋರುವ ಡಾ.ಅನ್ನದಾನೀಶ್ವರ ಪೂಜ್ಯ ಗುರುಗಳ ಕಾಲದಲ್ಲಿ ನಾವಿದ್ದೀವಿ ಎನ್ನುವುದೇ ನಮ್ಮ ಪುಣ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಆಶೀರ್ವಚನ ನೀಡಿ, ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಅವಶ್ಯಕ. ಗುರು ಅಜ್ಞಾನ ಕಳೆದು ಸುಜ್ಞಾನವನ್ನು ನೀಡಿ ಒಳ್ಳೆಯ ಮಾರ್ಗದಲ್ಲಿ ನಡೆಸುತ್ತಾನೆ. ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಗುರುವಿನ ಮಹತ್ವ ದೊಡ್ಡದು ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಯಲಬುರ್ಗಾದ ವಾಗ್ಮಿ ಸಂಗಣ್ಣ ಕೊಪ್ಪಳ, ಹೊಳಲಿನ ಶ್ರೀ ಚನ್ನಬಸವ ದೇವರು ಮಾತನಾಡಿದರು. ವಿಜಯವಾಣಿ ಪತ್ರಿಕೆಯಿಂದ ನೀಡಲಾದ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಆನಂದಗೌಡ ಪಾಟೀಲ ಹಾಗೂ ಡಾ.ಬಸವರಾಜ ಬಳ್ಳಾರಿ ಅವರಿಗೆ ಶ್ರೀಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಭಕ್ತಿಸೇವೆ ವಹಿಸಿಕೊಂಡಿದ್ದ ಅಕ್ಕಮಹಾದೇವಿ ಅಂದಪ್ಪ ಕಡ್ಡಿ ಅವರನ್ನು ಶ್ರೀಗಳು ಸನ್ಮಾನಿಸಿದರು. ನೂರಾರು ಭಕ್ತರು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಿವೃತ್ತ ಮುಖ್ಯಶಿಕ್ಷಕ ಎಸ್.ಎಸ್. ಇನಾಮತಿ, ಶಿಕ್ಷಕ ಎಸ್.ಎಸ್. ಮಠ ಕಾರ್ಯಕ್ರಮ ನಿರ್ವಹಿಸಿದರು.