ಚಿಕ್ಕಬಳ್ಳಾಪುರ: ನೇಪಾಳ, ಕರ್ನಾಟಕದ ಐಹೊಳೆ ಹಾಗೂ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಭಗೀರಥ ಮಹರ್ಷಿಯರ ಶಿಲಾನ್ಯಾಸದ ಕುರುಹುಗಳು ಇಂದಿಗೂ ಇವೆ ಎಂದು ಉಪ ವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿಯಲ್ಲಿ ಮಾತನಾಡಿ, ಜೀವನದಲ್ಲಿ ಗುರಿ ಸಾಧಿಸಲು ಭಗೀರಥರ ಪ್ರಯತ್ನ ಅನುಸರಿಸಬೇಕು. ಭೂಮಿಯನ್ನು ಪವಿತ್ರಗೊಳಿಸುವ ಉದ್ದೇಶದಿಂದ ಯಾವುದೇ ಅಡೆತಡೆ ಎದುರಾದರೂ ಸಹ ಛಲಬಿಡದೆ ಗಂಗೆಯನ್ನು ಭೂಮಿಗೆ ತಂದಿದ್ದಾರೆ. ಅಂತಹ ಪ್ರಯತ್ನವನ್ನು ಎಲ್ಲರೂ ತಮ್ಮ ದಿನ ನಿತ್ಯದ ಉತ್ತಮ ಕೆಲಸಗಳಲ್ಲಿ ಅಳವಡಿಸಿಕೊಂಡು ಜೀವನವನ್ನು ಹಸಿರಾಗಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಉಪ್ಪಾರ ಮಹಾಸಭಾ ಸಂಘದ ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಭಗೀರಥರು ತ್ಯಾಗ, ಛಲದಿಂದ ಸಾಧನೆ ಮಾಡಿದ್ದಾರೆ. ಅವರ ಸತತ ಪರಿಶ್ರಮ, ತ್ಯಾಗ, ಛಲ, ಸದ್ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹರ್ಷಿಗಳ ಜಯಂತ್ಯುತ್ಸವವನ್ನು ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ವಿನೋದ್ ಕುಮಾರ್ ಭಗೀರಥ ಮಹರ್ಷಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಲಾವಿದ ಮಹಾಲಿಂಗಯ್ಯ ಭಗೀರಥರ ಕುರಿತು ವಚನ ಕೀರ್ತನೆ ಹಾಗೂ ಜಾನಪದ ಹಾಡುಗಳ ಮೂಲಕ ಮನರಂಜಿಸಿದರು. ಗಣ್ಯರು ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಗೀರಥಿ ಉಪ್ಪಾರ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಆಂಜಿನಪ್ಪ, ಜಿಲ್ಲಾ ಭಗೀರಥ ಯುವಕರ ಸಂಘದ ಅಧ್ಯಕ್ಷ ಡಿ.ವಿ.ಗಂಗಾಧರ್, ಖಜಾಂಚಿ ಎಂ.ಬಿ.ಮಂಜುನಾಥ್, ಸಂಚಾಲಕ ವೆಂಕಟರಾಜು, ತಾಲೂಕು ಭಗೀರಥಿ ಉಪ್ಪಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಕೃಷ್ಣಾ, ಪ್ರಧಾನ ಕಾರ್ಯದರ್ಶಿ ಬಿ.ರಂಜಿತ್ ಕುಮಾರ್, ಉಪಾಧ್ಯಕ್ಷ ಭೈರಪ್ಪ, ಖಜಾಂಚಿ ನಾರಾಯಣ ಸ್ವಾಮಿ ಮತ್ತಿತರರು ಇದ್ದರು.