ಜಿಲ್ಲೆ

ಗುರಿ ಸಾಧಿಸದಿದ್ದರೆ ಬುದ್ದಿ ಕಲಿಸಬೇಕಾಗುತ್ತದೆ!

ಚಿಕ್ಕಬಳ್ಳಾಪುರ : ಹಲವು ಇಲಾಖೆಗಳು ಕಾರ್ಯ ನಿರ್ವಹಣೆಯಲ್ಲಿ ಮುಂದಿವೆ. ಆದರೆ, ಕೆಲ ಇಲಾಖೆಗಳು ಹಿಂದುಳಿದಿವೆ. ಯಾವುದೇ ಅಧಿಕಾರಿ ನಿರೀಕ್ಷಿತ ಗುರಿ ಸಾಧಿಸದಿದ್ದಲ್ಲಿ ಖಾರವಾಗಿಯೇ ಬುದ್ದಿ ಕಲಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಚಿಕ್ಕಬಳ್ಳಾಪುರ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.ವಿವಿಧ ಇಲಾಖೆಗಳ ನಡುವೆ ಪರಸ್ಪರ ಸಮನ್ವಯದ ಕೊರತೆಯಿಂದ ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳು ನನೆಗುದಿಗೆ ಬಿದ್ದಿದೆ. ಇದಕ್ಕೆ ಮುಂಬರುವ ದಿನಗಳಲ್ಲಿ ಅವಕಾಶ ನೀಡದೆ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿವೇಶನ ರಹಿತರಿಗೆ ವಸತಿ : ತಾಲೂಕಿನಲ್ಲಿ 5961 ಮಂದಿ ನಿವೇಶನ ರಹಿತರಿದ್ದಾರೆ. 2 ವರ್ಷದೊಳಗೆ ವಸತಿ ಸೌಲಭ್ಯ ಒದಗಿಸಲು ಶ್ರಮಿಸಲಾಗುತ್ತಿದೆ. ಈಗಾಗಲೇ ಬಡಾವಣೆ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸರ್ವೇ ಬಾಕಿ, ಗ್ರಾಪಂಗಳಲ್ಲಿ ಗುರುತಿಸಿರುವ ಜಮೀನು ಹಸ್ತಾಂತರ, ಅರ್ಹ ಫಲಾನುಭವಿಗಳ ಪಟ್ಟಿ ಆಯ್ಕೆ ಸೇರಿ ನಾನಾ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲಾ ಮಟ್ಟದಲ್ಲಿ ಬಾಕಿ ಉಳಿದಿರುವ ಜಗಜೀವನ್ ರಾಮ್, ಅಂಬೇಡ್ಕರ್, ವಾಲ್ಮೀಕಿ, ಕನಕ, ಕೆಂಪೇಗೌಡ ಮತ್ತು ದೇವರಾಜ್ ಅರಸು ಭವನಗಳ ನಿರ್ಮಾಣಕ್ಕೆ ಬೇಕಿರುವ ತಲಾ 2 ಎಕರೆ ಜಾಗವನ್ನು ಮಂಜೂರು ಮಾಡಲು ಸೂಚಿಸಿದರು.

ಮಾದರಿ ಆರೋಗ್ಯ ಕೇಂದ್ರ : ನಂದಿ, ಪೆರೇಸಂದ್ರ, ದಿಬ್ಬೂರು ಆರೋಗ್ಯ ಕೇಂದ್ರಗಳಿಗೆ ಬರುವ ಹೊರ ರೋಗಿಗಳ ಸಂಖ್ಯೆ ತುಂಬಾ ಕಡಿಮೆಯಾಗಿರುವುದಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದರು.ಮೊದಲು ದಿನಕ್ಕೆ ಕನಿಷ್ಠ 100 ರಿಂದ 150 ಮಂದಿ ಆಗಮಿಸುತ್ತಿದ್ದರು. ಈಗ ಕೇವಲ 20 ರಿಂದ 50ಕ್ಕೆ ಕುಸಿದಿದೆ. ಇದು ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆಯ ಗುಣಮಟ್ಟ, ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಣೆ ವೈಖರಿಯನ್ನು ಎತ್ತಿ ತೋರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ತಾಲೂಕಿನಲ್ಲಿ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದರ ಅನುಷ್ಠಾನಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿವಿ ನೆರವನ್ನು ಪಡೆಯಲಾಗುತ್ತದೆ ಎಂದರು.

ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ ರಾಜಾಕಾಂತ್, ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಾ.ಪಂ.ಅಧ್ಯಕ್ಷ ಬಿ.ಎಂ ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.