ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗೌರಿದೇವಿಯ ಸನ್ನಿಧಿಯಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅರೆಮಾದನಹಳ್ಳಿ ಶ್ರೀಗಳು ಆಶೀರ್ವಚನ ನೀಡಿದರು. ವಡ್ಡನಹಾಳ್ ಸಾವಿತ್ರಿಪೀಠದ ಶ್ರೀ ಶಂಕರಾತ್ಮಾನಂದ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಗುರಿ ಸಾಧನೆಗೆ ಬೇಕು ಗುರುಕೃಪೆ

ಕಡೂರು: ಏನನ್ನಾದರೂ ಸಾಧಿಸಬೇಕಾದರೆ ಗುರುಕೃಪೆ ಬೇಕು ಎಂದು ಅರೆಮಾದನಹಳ್ಳಿ ಅನಂತವಿಭೂಷಿತ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ಸಖರಾಯಪಟ್ಟಣ ಬಳಿ ಎಸ್.ಬಿದರೆ ಗ್ರಾಮದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗೌರಿ ಸನ್ನಿಧಿಯಲ್ಲಿ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿಗೆ ವಿಶೇಷ ಗೌರವವಿದೆ. ಅದರಲ್ಲಿಯೂ ಗಣೇಶನಿಗೆ ಪ್ರಥಮ ಪೂಜೆಯಿದ್ದು ಜತೆಯಲ್ಲಿ ಗೌರಿಯನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಲೋಕಕಲ್ಯಾಣಕ್ಕಾಗಿ ಗೌರಿದೇವಿಯನ್ನು 15 ದಿನಗಳ ಕಾಲ ಪುರೋಹಿತ ಕಷ್ಣಮೂರ್ತಿ ಆಚಾರ್ಯ ಅವರ ಮನೆಯಂಗಳದಲ್ಲಿ ಊರಿನವರ ಸಹಕಾರದಲ್ಲಿ ಪೂಜಿಸಿರುವುದು ಧಾರ್ಮಿಕ ಶಕ್ತಿ ಹೆಚ್ಚಿಸಿದೆ ಎಂದರು.

ವಿಶ್ವಕರ್ಮ ಸಮುದಾಯ ಕಲೆಗೆ ಹೆಸರುವಾಸಿ. ಬೇಲೂರು, ಹಳೇಬೀಡು ದೇವಾಲಯಗಳಿಂದ ಹಿಡಿದು ಇತ್ತೀಚಿನ ರಾಮಮಂದಿರದ ಬಾಲರಾಮನ ವಿಗ್ರಹದವರೆಗೆ ವಿಶ್ವಕರ್ಮರ ಕೊಡುಗೆ ಸಾಕಷ್ಟಿದೆ. ಭಾರತೀಯ ಸಂಸ್ಕೃತಿಯಲ್ಲಿ ಗಣಪತಿ ಪ್ರತಿಷ್ಠಾಪಿಸಲು ಅನೇಕ ತೊಡಕುಗಳನ್ನು ತರುತ್ತಿರುವುದು ವಿಷಾದನೀಯ. ನಾವೆಲ್ಲರೂ ಒಗ್ಗಟ್ಟಾಗಿ ಧಾರ್ಮಿಕ ಆಚರಣೆಯಲ್ಲಿ ತೊಡಗಿ ಎಲ್ಲರೂ ಒಂದೇ ಎನ್ನುವುದನ್ನು ತೋರಿಸಬೇಕಾಗಿದೆ ಎಂದರು.

ಪುರೋಹಿತ ಕಷ್ಣಮೂರ್ತಿ ಆಚಾರ್ಯ ಮಾತನಾಡಿ, ನಾಲ್ಕು ವರ್ಷಗಳಿಂದ ಸತತವಾಗಿ ಗೌರಿದೇವಿಯನ್ನು ಪ್ರತಿಷ್ಠಾಪಿಸಲಗುತ್ತಿದೆ. ಇದರ ಶಿಲ್ಪಿ ತಾಲೂಕಿನ ಪ್ರಮೋದ್ ವಿಶ್ವಕರ್ಮ ಆಗಿದ್ದು, ಮೂರ್ತಿ ಅದ್ಭುತವಾಗಿ ಮೂಡಿದೆ ಎಂದರು.

ವಡ್ಡನಹಾಳ್ ಸಾವಿತ್ರಿಪೀಠದ ಶ್ರೀ ಶಂಕರಾತ್ಮಾನಂದ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನದಲ್ಲಿ ಸರ್ಕಾರದ ಸುತ್ತೋಲೆಯಂತೆ ಧಾರ್ಮಿಕ ಆಚರಣೆ ನಡೆಸುವುದು ಕಷ್ಟಕರವಾಗುತ್ತಿದೆ. ನಾವೆಲ್ಲರೂ ಒಗ್ಗಟ್ಟಾದಾಗ ಮಾತ್ರ ಪರಂಪರೆ ಉಳಿಯುತ್ತದೆ. ಜನಗಣತಿಯಲ್ಲಿ ವಿಶ್ವಕರ್ಮ ಅಥವಾ ವಿಶ್ವಬ್ರಾಹ್ಮಣ ಎಂದು ಮಾತ್ರ ನಮೂದಿಸಿ. ಬೇರೆ ಯಾವುದೇ ಉಪಪಂಗಡಗಳನ್ನು ನಮೂದಿಸಬಾರದು ಎಂದು ಹೇಳಿದರು.

ಅರೆಮಾದನಹಳ್ಳಿ ಮಠದ ಉತ್ತರಾಧಿಕಾರಿ ರೋಹಿಣಿ ಶರ್ಮ, ಶ್ರೀ ಕಾಳಹಸ್ತೀಶ್ವರ ಸೇವಾ ಸಮಿತಿ ಸದಸ್ಯರು, ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.