ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಗಣಿತ ವಿಷಯ ಕಲಿಸಿದರೆ, ಮಕ್ಕಳಲ್ಲಿ ಉತ್ತಮ ಪ್ರಗತಿ ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅಭಿಪ್ರಾಯಪಟ್ಟರು.
ನಗರದ ಬಾಲಬಳಗ ಶಾಲೆಯಲ್ಲಿ ಸೋಮವಾರ ಗಣಿತ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಪರಿಶ್ರಮ, ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಹೀಗಾಗಿ ಮಕ್ಕಳು ಹೊಂದಿರುವ ಗುರಿ ತಲುಪಲು ಸತತ ಪರಿಶ್ರಮಪಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಮಾತನಾಡಿ, ಗಣಿತದ ಎಲ್ಲ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ಕಲಿಯಬಹುದು. ಅಂದಾಗ ಮಾತ್ರ ಗಣಿತ ಸುಲಭವಾಗಿ ಅರಿಯಲು ಸಾಧ್ಯ ಎಂದರು.
ಬಾಲಬಳಗ ಸೃಜನಶೀಲ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಮಾತನಾಡಿ, ಮಕ್ಕಳಿಗೆ ಗಣಿತ ಸುಲಭವಾಗಬೇಕು. ಅದಕ್ಕಾಗಿ ಬಾಲಬಳಗ ಗಣಿತ ಪ್ರಯೋಗಾಲಯವು ಇತರ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರಿಗೆ ಗಣಿತ ಕಾರ್ಯಾಗಾರಗಳನ್ನು ಆಯೋಜಿಸುವ ಯೋಜನೆಯನ್ನು ಹೊಂದಿದೆ ಎಂದರು.
ಗಣಿತ ವಿಷಯ ಪರಿವೀಕ್ಷಕ ಯಲ್ಲಪ್ಪ ಹುಬ್ಬಳ್ಳಿ, ನಿವೃತ್ತ ಮುಖ್ಯ ಶಿಕ್ಷಕಿ ವಿ.ಎನ್. ಕೀರ್ತಿವತಿ, ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.