ಜಿಲ್ಲೆ

ಗುರಿ ತೋರುವ ಗುರುಗಳ ಬದುಕು ನುಂಗಿದ ಕರೊನಾ

ಮಧುಗಿರಿ: ಕರೊನಾ ಹೊಡೆತಕ್ಕೆ ಶೈಕ್ಷಣಿಕ ಜಿಲ್ಲೆಯ 1820 ಶಿಕ್ಷಕರು ಅಕ್ಷರಶಃ ನಲುಗಿದ್ದು, 4 ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ 125 ಖಾಸಗಿ ಅನುದಾನರಹಿತ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 1447 ಮತ್ತು ಹೈಸ್ಕೂಲ್ ವಿಭಾಗದಲ್ಲಿ 373 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಬದುಕು ಕಂಡುಕೊಂಡ ಖಾಸಗಿ ಶಾಲೆ ಶಿಕ್ಷಕರ ಬಹುತೇಕ ಕುಟುಂಬಗಳು ಆರ್ಥಿಕವಾಗೇನೂ ಸದೃಢವಾಗಿಲ್ಲ.

ಕಷ್ಟ ನುಂಗಿಕೊಂಡು ಮಕ್ಕಳಿಗೆ ಅಕ್ಷರ ಕಲಿಸಿ ಬದುಕಿನ ದಾರಿ ಕಂಡುಕೊಂಡಿದ್ದು, ಕರೊನಾ ಬಹುದೊಡ್ಡ ಹೊಡೆತ ನೀಡಿದೆ. ಶಾಲೆಗಳು ಪುನರಾರಂಭವಾಗದ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳೂ ಸಮಸ್ಯೆಗೆ ಸಿಲುಕಿವೆ. ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಬೇಕಾದ ಆರ್‌ಟಿಇ ಹಣದ ಸಂಪೂರ್ಣ ಬಾಕಿ ಬಂದಿಲ್ಲ. ಹೀಗಾಗಿ ಖಾಸಗಿ ಶಾಲೆಗಳು ವೇತನ ನೀಡುವ ಸ್ಥಿತಿಯಲ್ಲಿಲ್ಲ. ಇದು ಶಿಕ್ಷಕರ ಬದುಕು ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ.

ಸರ್ಕಾರದ ದ್ವಂದ್ವ ನೀತಿ: 4 ತಿಂಗಳಿನಿಂದ ವೇತನವಿಲ್ಲ, ನಾವು ಶಿಕ್ಷಕರಲ್ಲವಾ...? ತೊಂದರೆಗೊಳಗಾದ ಅಸಂಘಟಿತ ಕುಟುಂಬಗಳಿಗೆ ಪ್ಯಾಕೇಜ್ ಘೋಷಿಸುವ ಸರ್ಕಾರ ಶಿಕ್ಷಕರ ಸಮಸ್ಯೆ ಆಲಿಸದಿರುವುದು ಯಾವ ನ್ಯಾಯ..? ಕರೊನಾ ಸೋಂಕು ಕಡಿಮೆಯಾಗದ ಹೊರತು ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪುನರಾರಂಭಗೊಳ್ಳುವ ಲಕ್ಷಣವಿಲ್ಲ. ಸಾಲಸೋಲ ಮಾಡಿ ಬದುಕು ಸಾಗಿಸುತ್ತಿದ್ದು, ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮನ್ನೇ ಅವಲಂಬಿಸಿರುವ ಕುಟುಂಬಗಳ ಪರಿಸ್ಥಿತಿ ಏನು..? ಶಿಕ್ಷಣ ಸಚಿವ ಸುರೇಶ್ ಕುಮಾರ್ ಜಾಣ ಮೌನ ವಹಿಸಿರುವುದು ಸರಿಯಲ್ಲ ಎಂಬುದು ಖಾಸಗಿ ಶಾಲಾ ಶಿಕ್ಷಕರ ಅಸಮಾಧಾನ.

4 ತಿಂಗಳಿನಿಂದ ವೇತನವಿಲ್ಲ. ಪಾಲಕರಿಗೆ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಲು ಒತ್ತಡ ಹೇರುವಂತಿಲ್ಲ ಎಂದು ಸರ್ಕಾರ ಆದೇಶಿಸಿರುವುದರಿಂದ ಖಾಸಗಿ ಆಡಳಿತ ಮಂಡಳಿಗಳೂ ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಹಾಗಾಗಿ ಶಾಲೆಗಳು ಆರಂಭವಾಗುವವರೆಗೂ ಸರ್ಕಾರವೇ ಖಾಸಗಿ ಶಾಲಾ ಶಿಕ್ಷಕರಿಗೆ ಪರ್ಯಾಯ ನೆರವು ನೀಡಬೇಕಿದೆ. ಮಂಜುಳಾ ನಾಗಭೂಷಣ್ ಮುಖ್ಯಶಿಕ್ಷಕಿ, ಕಾರ್ಡಿಯಲ್ ಶಾಲೆ ಖಾಸಗಿ ಶಾಲೆಗಳಿಗೆ ಮೊದಲ ಕಂತಿನ ಆರ್‌ಟಿಇ ಹಣ ಬಿಡುಗಡೆಯಾಗಿದ್ದು, 2ನೇ ಕಂತಿನ ಹಣ ಬಿಡುಗಡೆಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸಂಕಷ್ಟದಲ್ಲಿರುವ ಶಾಲಾ ಶಿಕ್ಷಕರ ನೆರವಿಗೆ ಧಾವಿಸಬೇಕು. ರೇವಣಸಿದ್ದಪ್ಪ ಡಿಡಿಪಿಐ