ಜಿಲ್ಲೆ

ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ: ಡಾ.ಆನಂದ ಸಂಕೇಶ್ವರ

ಮೈಸೂರು: ಯುವ ಉದ್ದಿಮೆದಾರರು ಸಕಾರಾತ್ಮಕ ಚಿಂತನೆ, ಸಕಾರಾತ್ಮಕ ಮನೋಭಾವ ಮತ್ತು ಗುರಿ ತಲುಪಲು ಕಠಿಣ ಪರಿಶ್ರಮ ಹಾಕಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಹೇಳಿದರು.

ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ ಸಮಾವೇಶದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಲ್ಲ ಉದ್ದಿಮೆಗಳಲ್ಲೂ ಏರಿಳಿತಗಳು ಸಾಮಾನ್ಯ. ಇದಕ್ಕೆ ಎದೆಗುಂದಬಾರದು. ಎಂತಹ ಕಠಿಣ ಸವಾಲುಗಳನ್ನು ಶಾಂತಚಿತ್ತದಿಂದ ಎದುರಿಸಬೇಕು. ಕರೊನಾ ಕಾಲ ಇದನ್ನು ಕಲಿಸಿಕೊಟ್ಟಿದೆ ಎಂದರು.

ಕೈಗಾರಿಕಾ ಕ್ಷೇತ್ರದಲ್ಲಿ ದಕ್ಷಿಣ ಭಾರತ ಮತ್ತು ಉತ್ತರ ಭಾರತ ಎಂಬ ವ್ಯತ್ಯಾಸವೇನು ಇಲ್ಲ. ದಕ್ಷಿಣ ಭಾರತ ಉತ್ಪಾದನಾ ಪ್ರದೇಶ. ಇಲ್ಲಿಯ ವಸ್ತುಗಳಿಗೆ ಉತ್ತರ ಭಾರತವೇ ಮಾರುಕಟ್ಟೆ. ಈ ವಿಷಯದಲ್ಲಿ ಭಿನ್ನತೆ ಏನಿಲ್ಲ ಎಂದು ಸಭಿಕರ ಪ್ರಶ್ನೆವೊಂದಕ್ಕೆ ಉತ್ತರಿಸಿದರು.

ವಿಆರ್‌ಎಲ್ ವತಿಯಿಂದ ವಿಮಾನಯಾನ ಸೇವೆ ಆರಂಭಿಸುವ ಕುರಿತು ಆಲೋಚಿಸಿಲ್ಲ. ಏಕೆಂದರೆ, ಇದು ಲಾಭದಾಯಕ ಕ್ಷೇತ್ರವಲ್ಲ. ಅಂತಾರಾಷ್ಟ್ರೀಯ, ದೇಶದೊಳಗೆ ಈ ಸೇವೆ ನೀಡುತ್ತಿರುವ ಬಹಳಷ್ಟು ಸಂಸ್ಥೆಗಳು ನಷ್ಟದಲ್ಲಿವೆ.

ಕೇವಲ 2-3 ಸಂಸ್ಥೆಗಳು ಲಾಭದಲ್ಲಿವೆ. ಕಳೆದ ಕೆಲ ವರ್ಷಗಳ ಹಿಂದೆ ಎರಡು ಸಂಸ್ಥೆಗಳು ಮುಚ್ಚಿವೆ. ಹೀಗಾಗಿ, ಈ ಕ್ಷೇತ್ರವನ್ನು ಪ್ರವೇಶಿಸುವ ಕುರಿತು ಚಿಂತಿಸಿಲ್ಲ ಎಂದರು.

ವಿಆರ್‌ಎಲ್ ಸಂಸ್ಥೆ ಯಶೋಗಾಥೆಯನ್ನು ವಿವರಿಸಿದ ಅವರು, ಸಭಿಕರ, ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಉತ್ತರಿಸಿದರು.