ಬಾಗೇಪಲ್ಲಿ: ತಾಲೂಕಿನ ಐತಿಹಾಸಿಕ ಸ್ಥಳ ಗುಮ್ಮನಾಯಕನಪಾಳ್ಯದ ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವುದು ತಾಲೂಕಿನ ನೀರಿನ ಬವಣೆಗೆ ಮುಕ್ತಿ ದೊರೆಯುವ ನಿರೀಕ್ಷೆ ಮೂಡಿಸಿದೆ.
ಕಣಿವೆಯಲ್ಲಿ ಅಣೆಕಟ್ಟು ನಿರ್ಮಾಣದ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬರದಿಂದ ಸದ್ಯದಲ್ಲೇ ಬಚಾವಾಗುವ ಕನಸು ಹರಡಿದೆ.
ಬಹುತೇಕ ಹಳ್ಳಿಗಳು ಬರದ ದವಡೆಗೆ ಸಿಲುಕಿದ್ದು ಕೃಷಿ ಮತ್ತು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಪರಿಹಾರವಾಗಿ ಗಂಟ್ಲಮಲ್ಲಮ್ಮನ ಕಣಿವೆ ಬಳಿ ಅಣೆಕಟ್ಟು ನಿರ್ಮಿಸಬೇಕೆಂಬ ಒತ್ತಾಯ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದ್ದು ಈ ನಿಟ್ಟಿನಲ್ಲಿ ಪರಿಸರವಾದಿ ಬಿ.ಆರ್.ಕೃಷ್ಣ, ಸಂಸದರು, ಶಾಸಕರೂ ಸೇರಿ ಹಲವರಿಗೆ ಮನವಿ ಸಲ್ಲಿಸಿದ್ದರು.
ಅದರಂತೆ 2018ರ ನವೆಂಬರ್ 21ರಂದು ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು, ಆದರೆ ಪ್ರಗತಿ ಆಗಿರಲಿಲ್ಲ, ಈಗ ಸಚಿವರು ಸ್ಪಂದಿಸಿದ್ದು, ಅಣೆಕಟ್ಟೆ ನಿರ್ಮಾಣಕ್ಕೆ ಸರ್ಕಾರ ಸಮ್ಮತಿಸಿದೆ.
ವಿಶೇಷ ಯೋಜನೆ: ಅಣೆಕಟ್ಟೆ ನಿರ್ಮಾಣದ ಮೂಲಕ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ, ನೀರು ಶುದ್ಧೀಕರಣ ಘಟಕ, ಸುಂದರ ಉದ್ಯಾನ, ದೋಣಿ ವಿಹಾರ ಕೇಂದ್ರ, ಐತಿಹಾಸಿಕ ಸ್ಮಾರಕಗಳನ್ನು ಒಗ್ಗೂಡಿಸಿ ಚರಿತ್ರೆ ವನ, ಪೊಲೀಸ್ ಚೌಕಿ, ಆಸ್ಪತ್ರೆ ಸೇರಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು. ಗುಮ್ಮನಾಯಕಪಾಳ್ಯ, ಹಿರಣೇಶ್ವರ ದೇವಾಲಯ ಸೇರಿ ಇತರ ತಾಣಗಳಿರುವುದರಿಂದ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಜತೆಗೆ ನಶಿಸುತ್ತಿರುವ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಉಳಿವಿಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.