ಜಿಲ್ಲೆ

ಗುಬ್ಬಿ ಪಟ್ಟಣದಲ್ಲಿ ಶ್ರೀ ಚತುಷ್ಪಥ ಅಭಿವೃದ್ಧಿ

ರೈಲ್ವೆ, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ, ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ

ಗುಬ್ಬಿ: ಗುಬ್ಬಿ ಪಟ್ಟಣದಲ್ಲಿ ಹಾದುಹೋಗುವ 8.5 ಕಿ.ಮೀ. ರಸ್ತೆಯನ್ನು 52 ಕೋಟಿ ರೂಪಾಯಿ ವೆಚ್ಚದಲ್ಲಿ ಚತುಷ್ಪಥ ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ತಾಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಪಂ ಆವರಣದಲ್ಲಿ ಶುಕ್ರವಾರ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೂ ಕ್ರಮವಹಿಸಲಾಗಿದೆ. ಇದಲ್ಲದೆ, ತಾಲೂಕು ಅಭಿವೃದ್ಧಿಗೆ ಕೇಂದ್ರದಿಂದ ನೂರು ಕೋಟಿ ರೂ. ಅನುದಾನ ತರಲಾಗುವುದು ಎಂದು ಭರವಸೆಯಿತ್ತರು. ಜೆಜೆಎಂ ಕಳಪೆಗೆ ಎಚ್ಚರಿಕೆ: ಜಲಜೀವನ್​ ಮಿಷನ್​ ಯೋಜನೆ ಅಡಿ ಕಳಪೆ ಕಾಮಗಾರಿ ನಡೆಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಹರ್​ ರ್​ ಜಲ್​ ಯೋಜನೆ ಜೆಜೆಎಂ ಯೋಜನೆ ಜಾರಿಗೆ ಪ್ರಧಾನಿ ಮೋದಿ ಅವರು 8 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ನೀರಾವರಿ ಯೋಜನೆಗಳಿಗೆ 2.64 ಲಕ್ಷ ಕೋಟಿ ರೂಪಾಯಿ ನೀಡಿದ್ದಾರೆ. ಜೆಜೆಎಂನಲ್ಲಿ ಕಳಪೆ ಬಗ್ಗೆ ದೂರು ಬಾರದಂತೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು ಎಂದು ಸೋಮಣ್ಣ ಸೂಚನೆ ನೀಡಿದರು. ರೈಲ್ವೆ ಇಲಾಖೆಗೆ 120 ವರ್ಷದ ಇತಿಹಾಸವಿದೆ. 12 ಲಕ್ಷ ಸಿಬ್ಬಂದಿ ಇರುವ ದೊಡ್ಡ ಖಾತೆ ನಿರ್ವಹಣೆ ಕಷ್ಟದ ಕೆಲಸವಾಗಿದೆ. ಇಂತಹ ಒತ್ತಡ ಮಧ್ಯೆ ತುಮಕೂರು ಕ್ಷೇತ್ರದ ಎಲ್ಲ ತಾಲೂಕಿಗೂ ಭೇಟಿ ನೀಡುತ್ತಿದ್ದೇನೆ.

ಅಭಿವೃದ್ಧಿ ವಿಚಾರವಾಗಿ ಗ್ರಾಮೀಣ ಭಾಗಕ್ಕೆ ತೆರಳುತ್ತೇನೆ. ಪ್ರಧಾನಿ ಮೋದಿ ಅವರ ದೇಶದ ಅಭಿವೃದ್ಧಿ ಕನಸು ನನಸು ಮಾಡಲು ಬದ್ಧರಾಗಿ ಕೆಲ ಮಾಡುತ್ತಿದ್ದೇವೆ. ಜನರನ್ನು ಅಧಿಕಾರಿಗಳು ಯಾವುದೇ ಕಾರಣಕ್ಕೂ ಅಲೆಸದೆ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು.

ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ಗೆ ವಿರೋಧ: ರೈತರಿಗೆ ಮರಣಶಾಸನವಾಗುವ ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಕಾಮಗಾರಿ ವಿರೋಧ ವ್ಯಕ್ತಪಡಿಸಿ ಸ್ಥಗಿತ ಮಾಡಲು ಸರ್ಕಾರಕ್ಕೆ ಒತ್ತಡ ಹೇರುತ್ತೇನೆ. ಡಿಸಿಎಂ ಡಿ.ಕೆ.ಶಿವಕುಮಾರ್​ ರಾಜ್ಯಕ್ಕೆ ಉಪಮುಖ್ಯಮಂತ್ರಿ, ರಾಮನಗರ ಜಿಲ್ಲೆ ಕನಕಪುರ ತಾಲೂಕಿಗೆ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಕೇಂದ್ರದ ಸಚಿವನಾಗಿ ಹೋರಾಟಕ್ಕೆ ಬರುವುದು ಕಷ್ಟ. ಬಿಜೆಪಿ ಸರ್ಕಾರ ಹಿಂದೆ ಈ ಲಿಂಕ್​ ಕೆನಾಲ್​ ಕೆಲಸ ನಿಲ್ಲಿಸಿತ್ತು. ಆದರೆ, ಕಾಂಗ್ರೆಸ್​ ಸರ್ಕಾರ ಮರು ಆರಂಭಿಸಿದ್ದು, ಯಾವುದೇ ಕಾರಣಕ್ಕೂ ಕಾರ್ಯಗತವಾಗಲು ಬಿಡುವುದಿಲ್ಲ ಎಂದು ಸೋಮಣ್ಣ ಹೇಳಿದರು.

ಯಾರ ಮನೆ ಬಾಗಿಲಿಗಾದರು ಹೋಗಲು ಸಿದ್ಧ!

ಕ್ಷೇತ್ರದ ಯಾವುದೇ ತಾಲೂಕಿರಲಿ ಅಭಿವೃದ್ಧಿ ವಿಚಾರವಾಗಿ ಯಾರ ಮನೆ ಬಾಗಿಲಿಗಾದರೂ ಹೋಗಲು ನಾನು ಸಿದ್ಧ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ, ಜಾತಿ, ಧರ್ಮ ಭೇದವಿಲ್ಲದೆ ಕೆಲಸ ಮಾಡಬೇಕು. ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ರಾಜಕಾರಣ ಮಾಡುವುದು ಬೇಡ. ಅಧಿಕಾರ ಶಾಶ್ವತ ಅಲ್ಲ. ಎಲ್ಲವನ್ನು ಮೀರಿ ಮಾನವೀಯತೆ ನೆಲಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ವಿ.ಸೋಮಣ್ಣ ತಾಕೀತು ಮಾಡಿದರು.

ಅಂಗವಿಕಲರಿಗೆ ಸಲಕರಣೆ ವಿತರಣೆ: ಜಿಲ್ಲೆಯಲ್ಲಿ 46 ಸಾವಿರ ಅಂಗವಿಕಲರಿದ್ದಾರೆ. 4 ಸಾವಿರ ಬುದ್ಧಿಮಾಂದ್ಯರಿದ್ದಾರೆ. ಗುಬ್ಬಿ ತಾಲೂಕು ಕಸಬಾ, ಚೇಳೂರು, ಹಾಗಲವಾಡಿ ಹೋಬಳಿಯ ಅಂಗವಿಕಲ ಲಾನುಭವಿಗಳಿಗೆ ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಎಡಿಐಪಿ ಯೋಜನೆಯಡಿ ಸಹಾಯಕ ಸಲಕರಣೆಗಳನ್ನು ಕೇಂದ್ರ ಸಚಿವ ಸೋಮಣ್ಣ ವಿತರಿಸಿದರು. ಇದೇ ವೇಳೆ ಕಸಬಾ ಹೋಬಳಿಯಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ನೂರಾರು ಜನರ ಅಹವಾಲು ಆಲಿಸಿದರು.

ಸದಸ್ಯರಾದ ಎಚ್​.ಬಿ.ನರೇಶ್​, ಮೋಹನ್​, ಸಿದ್ದಗಂಗಮ್ಮ, ಉಪ ವಿಭಾಗಾಧಿಕಾರಿ ಗೌರವ ಕುಮಾರ್​ ಶೆಟ್ಟಿ, ತಹಸೀಲ್ದಾರ್​ ಬಿ.ಆರತಿ, ತಾಪಂ ಇಒ ಶಿವಪ್ರಕಾಶ, ಎನ್​ಡಿಎ ಮುಖಂಡರಾದ ಬಿ.ಎಸ್​.ನಾಗರಾಜ್​, ಎಸ್​.ಡಿ.ದಿಲೀಪ್​ ಕುಮಾರ್​, ಜಿ.ಎನ್​.ಬೆಟ್ಟಸ್ವಾಮಿ, ಕಳ್ಳಿಪಾಳ್ಯ ಲೋಕೇಶ್​, ಎನ್​.ಸಿ.ಪ್ರಕಾಶ್​, ಪಿ.ಬಿ.ಚಂದ್ರಶೇಖರ್​ಬಾಬು, ಹೊನ್ನಗಿರಿಗೌಡ, ಪಂಚಾಕ್ಷರಿ, ಚಿಕ್ಕವಿರಯ್ಯ ಮತ್ತಿತರರು ಉಪಸ್ಥಿತರಿದ್ದರು.