ಜಿಲ್ಲೆ

ಗುಬ್ಬಿ ಟಿಎಪಿಸಿಎಂಎಸ್​ ಆಯ್ಕೆ

ತುಮಕೂರು ಡೆಸ್ಕ್

 ಗುಬ್ಬಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬೆಣಚಿಗೆರೆ ಬಿ.ಎಸ್​.ಪಂಚಾಕ್ಷರಿ ಹಾಗೂ ಉಪಾಧ್ಯಕ್ಷರಾಗಿ ಹಾಗಲವಾಡಿ ಜಯಪ್ರಕಾಶ್​ ಅವಿರೋಧ ಆಯ್ಕೆಯಾದರು.

ಟಿಎಪಿಸಿಎಂಎಸ್​ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಂಚಾಕ್ಷರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಪ್ರಕಾಶ್​ ಹೊರತು ಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರ ಇಲಾಖೆಯ ಕೆ.ಎಚ್​.ಮಹಂತೇಶಯ್ಯ ಘೋಷಿಸಿದರು.

ನೂತನ ಅಧ್ಯಕ್ಷ ಬಿ.ಎಸ್​.ಪಂಚಾಕ್ಷರಿ ಮಾತನಾಡಿ, ಕೃಷಿಕ ವರ್ಗದ ಹಿತ ಕಾಯುವ ಜತೆಗೆ ಈ ಸಹಕಾರ ಸಂಘವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ನಿರ್ದೇಶಕರ ಸಹಕಾರ ಪಡೆದು ಕೆಲಸ ಮಾಡುತ್ತೇನೆ. ರೈತರ ಕ್ಷೇತ್ರದಿಂದ ಆಯ್ಕೆಯಾದ ನಾನು ರೈತ ಪರ ಕೆಲಸ ಮಾಡಲು ಎಲ್ಲರ ಸಹಕಾರವನ್ನು ಪಕ್ಷಾತಿತವಾಗಿ ಕೇಳುತ್ತೇನೆ ಎಂದರು.

ಡಿಸಿಸಿ ಬ್ಯಾಂಕ್​ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ ಮಾತನಾಡಿ, ಪಕ್ಷಾತಿತ ನಿಲುವು ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಂಡು ಬಂದಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಸ್ವಲ್ಪ ರಾಜಕಾರಣ ಕಂಡು ಬಂತು. ಆದರೂ ಮತದಾರರು ಆಯ್ಕೆ ಮಾಡಿದ ನಿರ್ದೇಶಕರು ರೈತರ ಪರ ನಿಲ್ಲುತ್ತಾರೆ. ಸರ್ಕಾರ ಹಾಗೂ ಸಹಕಾರ ಇಲಾಖೆಯ ಸಹಾಯ ಪಡೆದು ಕೆ.ಎನ್​.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿಪಡಿಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ನೂತನ ಉಪಾಧ್ಯಕ್ಷ ಜಯಪ್ರಕಾಶ್​ ಮಾತನಾಡಿ, ಕೆಲ ನಿರ್ದೇಶಕರ ಆಯ್ಕೆ ಅವಿರೋಧ ಹಾಗೂ ಕೆಲ ಸದಸ್ಯರ ಆಯ್ಕೆ ಮತದಾನ ಮೂಲಕ ನಡೆದಿದೆ. ಆದರೆ ನಂತರದಲ್ಲಿ ಯಾವ ಗೊಂದಲವಿಲ್ಲದೆ ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಈ ಸ್ಥಾನಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು.

ಸಹಕಾರ ಯೂನಿಯನ್​ ನಿರ್ದೇಶಕ ಜಿ. ಡಿ.ಸುರೇಶಗೌಡ, ಸಂಘದ ಕಾರ್ಯದರ್ಶಿ ಎಸ್​.ವಿ.ಶ್ರೀನಾಥ್​, ಮುಖಂಡರಾದ ಎಚ್​.ಟಿ.ಭೈರಪ್ಪ, ಯತೀಶ್​, ಸಿದ್ದರಾಮಯ್ಯ, ಉಮೇಶ್​, ಜಿ.ಆರ್​.ಪ್ರಕಾಶ್​, ಡಿ.ರಘು, ಅರ್ಜುನ್​, ಅನಿಲ್​, ಅರೇಹಳ್ಳಿ ರಾಜು ಮತ್ತಿತರರು ಇದ್ದರು.