ಜಿಲ್ಲೆ

ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹ

ಆಲೂರು: ನಗರೋತ್ಥಾನ ಯೋಜನೆಯಡಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಪ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಗ್ರಹಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಾಸಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ತಾಹೆರಾ ಬೇಗಂ ಮಾತನಾಡಿ, ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ 2.08 ಕೋಟಿ ರೂ.ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಳಿಸದಿರುವುದರಿಂದ 2025ರ ಜನವರಿ 6ರಂದು ಜಿಲ್ಲಾ ನಗರಾಭಿವೃದ್ಧಿಕೋಶ ಇಲಾಖೆಗೆ ಪತ್ರ ಬರೆದು ಕೆಲಸ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ. ನಗರಾಭಿವೃದ್ಧಿಕೋಶ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದೆ ಎಂದು ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿ 11 ವಾರ್ಡ್‌ಗಳ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಿ, ಚರಂಡಿಗಳನ್ನು ಶುಚಿಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ವಾರ್ಡ್‌ಗಳ ರಸ್ತೆಗಳ ಇಕ್ಕೆಲಗಳಲ್ಲಿ ಕೆಲ ನಿವಾಸಿಗಳು ತಮ್ಮ ಮನೆ ಮುಂದೆ ಗಿಡಗಳನ್ನು ಬೆಳೆಸಿ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಮೊದಲೇ ನಿವಾಸಿಗಳಿಗೆ ಮಾಹಿತಿ ನೀಡಿ ತೆರವು ಮಾಡಬೇಕು ಎಂದು ಎಲ್ಲ ಸದಸ್ಯರು ಆಗ್ರಹಿಸಿದರು. ಅಧ್ಯಕ್ಷೆ ತಾಹೆರಾ ಬೇಗಂ ಮತ್ತು ಮುಖ್ಯಾಧಿಕಾರಿ ಮಂಜುನಾಥ್ ಪ್ರತಿಕ್ರಿಯಿಸಿ, ಜೆಸಿಬಿ ಬಳಸಿ ತೆರವುಗೊಳಿಸಲು ಕೂಡಲೇ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದರು.

ಪರಿಶಿಷ್ಟ ಜಾತಿಗೆ ಸೇರಿದ ಒಂದು ಮತ್ತು 8ನೇ ವಾರ್ಡ್‌ಗಳಿಗೆ 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ನೀಡಬೇಕು ಎಂದು ಆಗ್ರಹಿಸಿ ಸದಸ್ಯರಾದ ಧರ್ಮ, ಎ.ಡಿ.ಸಂತೋಷ್ ಸಭೆ ಬಹಿಷ್ಕರಿಸಿ ಹೊರ ನಡೆದರು. ಕೆಲ ಸಮಯದ ನಂತರ ಧರ್ಮ ಮತ್ತೆ ಸಭೆಗೆ ಆಗಮಿಸಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, 1ನೇ ವಾರ್ಡ್‌ಗೆ ನಗರೋತ್ಥಾನ ಯೋಜನೆಯಡಿ 33 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ ಮತ್ತು ಎಸ್‌ಎಫ್‌ಸಿ ಅನುದಾನದಲ್ಲಿ 2.40 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ ಆಗಿದೆ ಎಂದು ಮಾಹಿತಿ ನೀಡಿದರು.

ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆಗೆ ಟೆಂಡರ್ ಕರೆಯಲಾಗಿದೆ. ಎಸ್‌ಎಪಿಸಿ ಅನುದಾನದಲ್ಲಿ 13 ಬಡ ವಿದ್ಯಾರ್ಥಿಗಳಿಗೆ 31 ಸಾವಿರ ರೂ. ವಿದ್ಯಾರ್ಥಿವೇತನ ಮತ್ತು ಪೌರಕಾರ್ಮಿಕರ 2 ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಮುಖ್ಯರಸ್ತೆ ಮಧ್ಯೆ ಡಿವೈಡರ್‌ಗೆ ಅಲಂಕಾರಿಕ ದೀಪ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಸರ್ಕಾರದಿಂದ ಬರುವ ಅನುದಾನದಲ್ಲಿ ಎಲ್ಲ ವಾರ್ಡ್‌ಗಳಿಗೆ ಆದ್ಯತೆ ಮೇಲೆ ಹಂಚುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.

ಸದಸ್ಯರಾದ ತೌಫಿಕ್, ಹರೀಶ್, ಅಬ್ದುಲ್ ಖುದ್ದೂಸ್, ಸಂದೇಶ್, ಖಾಲಿದ್‌ಪಾಷ, ಶೀಲಾ, ಇಂಜಿನಿಯರ್ ಸುಜಾತಾ, ಸಿಬ್ಬಂದಿ ರಾಜಲಕ್ಷ್ಮೀ, ಲಲಿತಮ್ಮ, ಉಷಾರಾಣಿ ಭಾಗವಹಿಸಿದ್ದರು.