ಜಿಲ್ಲೆ

ಗುತ್ತಿಗೆದಾರರ ಬೇಡಿಕೆಗೆ ಸರ್ಕಾರ ಭರವಸೆ

ಕಲಬುರಗಿ: ರಾಜ್ಯದಲ್ಲಿ ಶೇ.೪೦ ಕಮಿಷನ್ ಬಗ್ಗೆ ತನಿಖೆ ನಡೆಸಿ, ನ್ಯಾಯ ಒದಗಿಸಿಕೊಡಬೇಕು ಎಂಬ ಆಗ್ರಹಕ್ಕೆ ನ್ಯಾ.ನಾಗಮೋಹನದಾಸ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ. ವಿವಿಧ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದೆ. ಮಾರ್ಚ್ನಲ್ಲಿ ಗುತ್ತಿಗೆದಾರರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿದ್ದು, ಅಲ್ಲಿವರೆಗೆ ಬೇಡಿಕೆ ಈಡೇರಿದರೆ ಸನ್ಮಾನ ಇಲ್ಲದಿದ್ದರೆ ಅಲ್ಲಿಂದಲೇ ಪ್ರತಿಭಟನೆ ಆರಂಭಿಸಲಾಗುವುದು ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಶೇಗಜಿ ತಿಳಿಸಿದರು.

ಇತ್ತೀಚೆಗೆ ಲೋಕೋಪಯೋಗಿ ಸಚಿವರು ಗುತ್ತಿಗೆದಾರರ ಸಭೆ ನಡೆಸಿದ್ದು, ಬೇಡಿಕೆಗಳಾದ ಪ್ಯಾಕೇಜ್ ಟೆಂಡರ್ ರದ್ದುಪಡಿಸಲು ಆದೇಶಿಸಿದ್ದು, ಬಾಕಿ ಬಿಲ್‌ನ್ನು ಎರಡು ಹಂತದಲ್ಲಿ ಶೇ.೨೫, ೩೦ರಷ್ಟು ಬಿಡುಗಡೆಗೆ ಒಪ್ಪಿದ್ದಾರೆ. ಜಿಎಸ್‌ಟಿ ಶೇ.೬ ಮೊತ್ತ ಸರ್ಕಾರದಿಂದ ಭರಿಸುವುದಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಟೆಂಡರ್ ಷರತ್ತುಗಳ ಬಗ್ಗೆ ಸೂಕ್ತ ಪ್ರಸ್ತಾಪ ಸಲ್ಲಿಸಲು ಸೂಚಿಸಿದ್ದಾರೆ. ಗುತ್ತಿಗೆದಾರರ ನಿಧನರಾದಲ್ಲಿ ಪರಿಹಾರ ಧನ ೫ರಿಂದ ೧೦ ಲಕ್ಷ ರೂ.ಗೆ ಹೆಚ್ಚಿಸಲು ಸಚಿವರು ಸೂಚಿಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಇಲಾಖೆಯಿಂದ ಗುತ್ತಿಗೆದಾರರು ಅನಗತ್ಯವಾಗಿ ನೋಟಿಸ್, ದಂಡ ಮತ್ತು ಬಡ್ಡಿ ಪಾವತಿಗೆ ವಿನಾಯಿತಿ ನೀಡುವ ಕುರಿತು ಸ್ಪಂದಿಸಿದ್ದಾರೆ. ಗುತ್ತಿಗೆದಾರರ ಲಾಭಾಂಶವನ್ನು ಶೇ.೧೦ರಿಂದ ೨೦ಕ್ಕೆ ಹೆಚ್ಚಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರರ ನಿಧಿಯಲ್ಲಿ ೪೦೦ ಕೋಟಿ ರೂ. ಜಮಾ ಇದ್ದು, ಅದನ್ನು ಬ್ಯಾಂಕ್‌ನಲ್ಲಿಟ್ಟು ಗುತ್ತಿಗೆದಾರರಿಗೆ ಉಚಿತ ಆರೋಗ್ಯ ವಿಮೆ ಮಾಡಿಸಬೇಕು ಎಂದು ಮನವಿ ಮಾಡಲಾಗಿದೆ. ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರ ಮತ್ತು ಹ್ಯಾಬಿಟಲ್ ಸಂಸ್ಥೆಗಳು ನಡೆಸುವ ಕಾಮಗಾರಿಗೆ ಜವಾಬ್ದಾರರೇ ಇರುವುದಿಲ್ಲ. ಈ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿ, ಕಾಮಗಾರಿ ಮಾಡಬೇಕು ಎಂದು ಆಗ್ರಹಿಸಿದರು.

ಸಚಿವರು ಸಭೆಯಲ್ಲಿ ನೀಡಿರುವ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮಾರ್ಚ್ನಲ್ಲಿ ನಡೆಯುವ ಸಮಾವೇಶವನ್ನೇ ಪ್ರತಿಭಟನಾ ವೇದಿಕೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.