ಜಿಲ್ಲೆ

ಗುತ್ತಿಗೆದಾರನಿಂದ ಕೂಲಿ ಹಣ ಹೋಗಿದ್ದಕ್ಕೆ ಜಟಾಪಟಿ : ಕುಣಿಗಲ್​ ಪುರಸಭೆ ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದ ಆಡಳಿತ ಪಕ್ಷದ ಸದಸ್ಯರು

ಕುಣಿಗಲ್​: ವಾಟರ್​ ಮನ್​ ಹಾಗೂ ಪಂಪ್​ಹೌಸ್​ ಸಿಬ್ಬಂದಿಗೆ ರಜೆಯ ಕೂಲಿ ಹಣವನ್ನು ಗುತ್ತಿಗೆದಾರನಿಂದ ಪಾವತಿ ಮಾಡಿರುವುದು... ಮಾಜಿ ಹಾಲಿ ಅಧ್ಯಕ್ಷ ಜಟಾಪಟಿ..., ಬೀದಿ ದೀಪಗಳು ಕೆಟ್ಟು ಮೂರು ತಿಂಗಳಾದರೂ ಸರಿಪಡಿಸದಿರುವುದು...,ಪಟ್ಟಣದಲ್ಲಿ ಕಸ ವಿಲೇವಾರಿ ಆಗದಿರುವುದು ಹಾಗೂ ಇನ್ನಿತರ ವಿಷಯಗಳು ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ರಂಗಸ್ವಾಮಿ ನೇತೃತ್ವದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾದವು.

ವಾಟರ್​ ಮನ್​, ಪಂಪ್​ಹೌಸ್​ ಸಿಬ್ಬಂದಿಗೆ ಗುತ್ತಿಗೆದಾರನಿಂದ ಹಣ ಪಾವತಿ ಮಾಡಿಸಿರುವ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ಆಕ್ಷೇಪಿಸಿ ಅಧ್ಯಕ್ಷರ ವಿರುದ್ಧ ತಿರುಗಿಬಿದ್ದರು.

ರಜೆ ಕೂಲಿ ಹಣವನ್ನು ಗುತ್ತಿಗೆದಾರನಿಂದ ಕೊಡಿಸಿದ್ದರಿಂದ ಸಿಬ್ಬಂದಿಗೆ ಸಿಗಬೇಕಾದ ಸಂಪೂರ್ಣ ಹಣ ಸಿಕ್ಕಿಲ್ಲ, ಇದಕ್ಕೆ ಅಧ್ಯಕ್ಷರೇ ನೇರ ಹೊಣೆ ಎಂದು ವಿರೋಧ ಪಕ್ಷದ ಬಿಜೆಪಿ ಸದಸ್ಯ ಕೆ.ಎಸ್​.ಕೃಷ್ಣ ವಿಷಯ ಪ್ರಸ್ತಾಪಿಸಿದರು.

ನಂತರ ಇದೇ ವಿಷಯವಾಗಿ ಆಡಳಿತ ಪಕ್ಷದ ಸದಸ್ಯರಾದ ಮಾಜಿ ಅಧ್ಯ ಎಸ್​.ಕೆ.ನಾಗೇಂದ್ರ, ಅರುಣ್​ ಕುಮಾರ್​ ಕೂಡಾ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಠರಾವು ಅಂಗೀಕರಿಸದೆ ವಾಟರ್​ ಮನ್​ ಹಾಗೂ ಪಂಪ್​ಹೌಸ್​ ಸಿಬ್ಬಂದಿಗೆ 8.75ಲಕ್ಷ ರೂಪಾಯಿಯನ್ನು ಗುತ್ತಿಗೆದಾರನ ಮೂಲಕ ನೀಡಲಾಗಿದೆ. ಗುತ್ತಿಗೆದಾರ 11 ಮಂದಿಗೆ ತಲಾ 80 ಸಾವಿರ ರೂಪಾಯಿ ನೀಡುವ ಬದಲು 55 ಸಾವಿರ ಹಣ ಪಾವತಿಸಿದ್ದಾರೆ ಎಂದು ಅರುಣ್​ ಕುಮಾರ್​, ನಾಗೇಂದ್ರ ಹಾಗೂ ಕೆ.ಎಸ್​.ಕೃಷ್ಣ ಆರೋಪಿಸಿದರು.

ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಸರ್ಕಾರದ ಆದೇಶದಂತೆ 2015ರಿಂದ ನೀಡಬೇಕಾಗಿದ್ದ ರಜೆ ಕೂಲಿ ಹಣವನ್ನು ಈ ಹಿಂದಿನ ಪುರಸಭೆಯ ಠರಾವಿನಂತೆ ಪಾವತಿಸಲಾಗಿದೆ. ಪುರಸಭೆಯಿಂದ ಪಾವತಿಸಲು ಅವಕಾಶವಿಲ್ಲದ ಕಾರಣ ಗುತ್ತಿಗೆದಾರನ ಮೂಲಕ ನೀಡಲಾಗಿದೆ. ಗುತ್ತಿಗೆದಾರ ಟಿಡಿಎಸ್​ ಹಾಗೂ ಜಿಎಸ್​ಟಿ ಹಿಡಿದುಕೊಂಡು ಸಿಬ್ಬಂದಿಗೆ ಕೊಟ್ಟಿದ್ದಾರೆ ಎಂದರು. ಆಗ ಈ ಹಿಂದಿನ ಸಭೆಯ ಠರಾವು ತೋರಿಸುವಂತೆ ಸದಸ್ಯರು ಪಟ್ಟು ಹಿಡಿದರು.

ಆಗ ಎಸ್​.ಕೆ.ನಾಗೇಂದ್ರ ಹಾಗೂ ರಂಗಸ್ವಾಮಿ ನಡುವೆ ಜಟಾಪಟಿ ನಡೆಯಿತು. ನೀನು ಅಧಿಕಾರದಲ್ಲಿ ಇದ್ದಾಗ ಹಣ ಪಾವತಿ ಮಾಡಬೇಕಿತ್ತು. ಈಗ ನಾನು ಮಾಡಿದ್ದೇನೆ ಎಂದು ರಂಗಸ್ವಾಮಿ ಹೇಳಿದಾಗ, ನಾನು ಅಧಿಕಾರದಲ್ಲಿ ಸಭೆಯ ಹಾಗೂ ಸದಸ್ಯರ ಗಮನಕ್ಕೆ ತರದೆ ಈ ರೀತಿಯ ಕೆಲಸಗಳನ್ನು ಮಾಡಿಲ್ಲ ಎಂದು ನಾಗೇಂದ್ರ ತಿರುಗೇಟು ಕೊಟ್ಟರು. ನಿನ್ನ ಅಧಿಕಾರ ಅವಧಿಯಲ್ಲಿ ಹುಲ್ಲು ಕಟಿಂಗ್​ ಮಿಷನ್​ಗೆ ಎಷ್ಟು ಹಣ ಕೊಟ್ಟು ತಂದಿದ್ದೀಯಾ ನನಗೆ ಗೊತ್ತಿಲ್ವಾ ಎಂದು ರಂಗಸ್ವಾಮಿ ಮತ್ತೆ ಟಾಂಗ್​ ನೀಡಿದರು.

ಇಲ್ಲಿ ನೀನು ಮಾಡಿದ್ದೇ ಕಾನೂನು ಆಗಿಬಿಟ್ಟಿದೆ !

ನೀನು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದೀಯಾ... ಇಲ್ಲಿ ನೀನು ಮಾಡಿದ್ದೇ ಕಾನೂನು ಆಗಿದೆ. ಇಲ್ಲಿ ಸದಸ್ಯರು ಯಾರಿಗೂ ಬೆಲೆ ಇಲ್ಲದಂತಾಗಿದೆ ಎಂದು ಅಧ್ಯಕ್ಷರಿಗೆ ನಾಗೇಂದ್ರ ಹೇಳಿದಾಗ ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗದ್ದಲ ಸೃಷ್ಟಿಯಾಯಿತು. ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರ ವಿರುದ್ಧ ಹರಿಹಾಯುತ್ತಿದ್ದಾಗ ವಿರೋಧ ಪಕ್ಷದ ಬಿಜೆಪಿ ಸದಸ್ಯ ಕೋಟೆ ನಾಗಣ್ಣ ಅಧ್ಯಕ್ಷರ ಬೆಂಬಲಕ್ಕೆ ನಿಂತು ಅವರ ಕಾರ್ಯವೈಖರಿ ಸಮರ್ಥಿಸಿಕೊಂಡರು.

ಈ ವೇಳೆ ರಂಗಸ್ವಾಮಿ ನನ್ನ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಹಿಸಿಕೊಳ್ಳಲಾಗದೆ ಎಸ್​.ಕೆ.ನಾಗೇಂದ್ರ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು. ಆಗ ಮತ್ತೆ ನಾಗೇಂದ್ರ ಹಾಗೂ ಅಧ್ಯಕ್ಷರ ನಡುವೆ ಮಾತಿನ ಸಮರ ನಡೆಯಿತು. ನಂತರ ಗುತ್ತಿಗೆದಾರನ ಮೂಲಕ ಹಣ ವಾಪಸ್​ ಪುರಸಭೆಗೆ ಸಂದಾಯ ಮಾಡಿಕೊಳ್ಳುವಂತೆ ಅರುಣ್​ ಕುಮಾರ್​, ನಾಗೇಂದ್ರ ಠರಾವು ಅಂಗೀಕರಿಸಿದರು. ಇದಕ್ಕೆ ಕೆಲಸ ಸದಸ್ಯರು ವಿರೋಧ ವ್ಯಕ್ತಡಿಸಿದರೆ ಮತ್ತೆ ಕೆಲವರು ಪರ ವಹಿಸಿದರು.

ಬಿಲ್​ ತಡೆ ಹಿಡಿಯಲು ಆಗ್ರಹ: ಪಟ್ಟಣದಲ್ಲಿ ಬೀದಿ ದೀಪಗಳು ಕೆಟ್ಟು ನಿಂತು 3 ತಿಂಗಳಾದರೂ ಸರಿಪಡಿಸಿಲ್ಲ, ಗುತ್ತಿಗೆದಾರನಿಗೆ ಬಿಲ್​ ಪಾವತಿ ತಡೆಹಿಡಿಯಬೇಕೆಂದು ಬಿಜೆಪಿ ಸದಸ್ಯರಾದ ಕೆ.ಎಸ್​.ಕೃಷ್ಣ ಹಾಗೂ ಆನಂದ್​ ಕುಮಾರ್​ (ಕಾಂಬ್ಲೇ) ಹಾಗೂ ಶಂಭುರಾಮಣ್ಣ ಆಗ್ರಹಿಸಿದರು. ಈ ವೇಳೆ ಇಂಜಿನಿಯರ್​ ಸುಮಾ ಅವರನ್ನು ತರಾಟೆ ತೆಗೆದುಕೊಂಡ ಸದಸ್ಯರು, ರಂಗಸ್ವಾಮಿ ಅಧಿಕಾರಗಳ ಮೇಲೆ ಹಿಡಿತ ಸಾಧಿಸದೇ ಆಡಳಿತ ಯಂತ್ರ ಕುಸಿದಿದೆ. ಸದಸ್ಯರ ಮಾತಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದರು.

ಪಟ್ಟಣ ನಾರುತ್ತಿದೆ:ಪಟ್ಟಣದಲ್ಲಿ ಕಸ ವಿಲೇವಾರಿ ತಲೆನೋವಾಗಿದೆ. ಪರಿಸರ ಇಂಜಿನಿಯರ್​ ಚಂದ್ರಶೇಖರ್​ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅವರ ಜಾಗಕ್ಕೆ ಬೇರೆಯವರನ್ನು ನಿಯೋಜನೆ ಮಾಡಬೇಕೆಂದು ರಾಮಣ್ಣ ಆಗ್ರಹಿಸಿದರು. ಕುಡಿಯುವ ನೀರನ್ನು ಸರಿಯಾಗಿ ಸರಬರಾಜು ಮಾಡುತ್ತಿಲ್ಲ, 10 ದಿನಕ್ಕೊಮೆ ನೀರು ಬಿಡಲಾಗುತ್ತದೆ, ಆ ನೀರೂ ಕೂಡ ಕಲುಷಿತ ನೀರಾಗಿದೆ. ಜನ ನಮಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದರು. ಉಪಾಧ್ಯೆ ಶಾಜಾನ ತಬಸುಮ್​, ಮುಖ್ಯಾಧಿಕಾರಿ ಶಿವಪ್ರಸಾದ್​, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್​ ಇದ್ದರು.