ಜಿಲ್ಲೆ

ಗುತ್ತಿಗೆದಾರ ಸಂತೋಷ್​ ಕುಟುಂಬಕ್ಕೆ ನೆರವಾಗಿ : ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಒತ್ತಾಯ

ರಾಮನಗರ: ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆಯಿಂದಾಗಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿರುವ ಕಾರಣ, ಕಾಮಗಾರಿಗೆ ತಗುಲಿದ ಪೂರ್ಣ ಹಣ ಹಾಗೂ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ರಾಮನಗರ ತಾಲೂಕು ಗುತ್ತಿಗೆದಾರರ ಸಂಘದ ಎಸ್​. ಬೆರೇಗೌಡ ಆಗ್ರಹಿಸಿದರು.

ನಗರದ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತ ಸಂತೋಷ್​ 4 ಕೋಟಿ ರೂ. ಕಾಮಗಾರಿ ಮಾಡಿದ್ದಾರೊ ಇಲ್ಲವೋ ಎಂಬುದನ್ನು ಪರಿಶೀಲಿಸಿ, ಗುಣಮಟ್ಟ ಪರೀಸಲಿ. ಈ ಹಣ ಹತ್ತಾರು ಜನರ ಕುಟುಂಬ ಕಾಪಾಡುತ್ತದೆ. ಸಂತೋಷ್​ ಕೂಡ ಎಲ್ಲಿ ಸಾಲ ಮಾಡಿದ್ದಾರೋ, ಮನೆ ಆಸ್ತಿ ಮಾರಿದ್ದಾರೋ ಗೊತ್ತಿಲ್ಲ. ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಸರ್ಕಾರ ಸಂತೋಷ್​ ಪಾಟೀಲ್​ ಕುಟುಂಬದ ನೆರವಿಗೆ ಬರಬೇಕು, ಪ್ರಕರಣದ ಸೂಕ್ತ ತನಿಖೆ ನಡೆಸಿ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.

ಈಗಾಗಲೇ ಪ್ರಕರಣ ದಾಖಲಾಗಿದ್ದರೂ ಇದರಲ್ಲಿ ಎ1 ಆರೋಪಿಯಾಗಿರುವ ಪ್ರಭಾವಿ ರಾಜಕಾರಣಿಯನ್ನು ಇನ್ನೂ ಬಂಧಿಸಿಲ್ಲ, ಯಾರ ಒತ್ತಡಕ್ಕೂ ಮಣಿಯದೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿೆ ಒಳಪಡಿಸಬೇಕು ಒಂದು ಬೈರೇಗೌಡ ಒತ್ತಾಯಿಸಿದರು.

ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ನೇತತ್ವದ ಸರ್ಕಾರವನ್ನು 10 ಪರ್ಸೆಂಟ್​ ಸರ್ಕಾರ ಎಂದಿದ್ದು ನಿಜ. ಆದರೆ, ಅವರದೇ ಪಕ್ಷದ ಬಿಜೆಪಿ ಸರ್ಕಾರ 40% ಸರ್ಕಾರವಾಗಿದೆ. ಗುತ್ತಿಗೆದಾರರು ಕೆಲಸ ಮಾಡಲಾಗದ ಸ್ಥಿತಿ ತಲುಪಿದ್ದು, ಗುತ್ತಿಗೆ ಕೆಲಸ ನಿಲ್ಲಿಸಬಾರದೆಂಬ ಕಾರಣದಿಂದ ಸಾಲ ಮಾಡಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿಯೇ ಸಂತೋಷ್​ ಪಾಟೀಲ್​ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬೈರೇಗೌಡ ದೂರಿದರು.

ರಾಮನಗರದಲ್ಲಿ ಹೊರಗಿನವರು: ಇತ್ತೀಚಿನ ದಿನಗಳಲ್ಲಿ ರಾಮನಗರದಲ್ಲಿ ಹೊರಗಡೆಯವರು ಕಾಮಗಾರಿ ಗುತ್ತಿಗೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಟೆಂಡರ್​ ಅಮೌಂಟ್​ಗಿಂತ ಹೆಚ್ಚಿನ (15-20) ಪರ್ಸೆಂಟೇಜ್​ ಕೊಡುತ್ತಾರೆ. ನಂತರ 10 ಪರ್ಸೆಂಟ್​ ಎಲ್​ಒಸಿ ಹಾಗೂ 10 ಪರ್ಸೆಂಟ್​ ಅಧಿಕಾರಿಗಳಿಗೆ ಹೋಗುತ್ತದೆ. ಈ ಹಂತದಲ್ಲಿ ಲಂಚ ನೀಡದಿದ್ದರೆ ಕಡತ ವಿಲೇವಾರಿ ಆಗುವುದಿಲ್ಲ ಎಂದು ಬೈರೇಗೌಡ ದೂರಿದರು.

ಈಗ ಕೆಲಸ ಮಾಡದಿದ್ದರೆ ಮುಂದೆ ಕೆಲಸಗಳು ಸಿಗುವುದಿಲ್ಲ. ಹೀಗಾಗಿ ಗುತ್ತಿಗೆದಾರರು 40 ಪರ್ಸೆಂಟ್​ ಲಂಚ ನೀಡಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಹೊಸದಾಗಿ ಇಂಜಿನಿಯರಿಂಗ್​ ಮುಗಿಸಿ ಗುತ್ತಿಗೆ ಪರವಾನಗಿ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಅವರೆಲ್ಲರೂ ಗುತ್ತಿಗೆದಾರರಾಗದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಯಾರೇ ಗುತ್ತಿಗೆದಾರರಾಗಲಿ ಟೆಂಡರ್​ ಆಗಿ ವರ್ಕ್​ ಆರ್ಡರ್​ ಆಗದಿದ್ದರೆ ಕಾಮಗಾರಿ ಮಾಡಬಾರದೆಂದು ಬೈರೇಗೌಡ ಮತ್ತು ಜಗದೀಶ್​ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂದ ಖಜಾಂಚಿ ಎನ್​.ನಾಗರಾಜಯ್ಯ, ಉಪಾಧ್ಯಕ್ಷ ಜಿ.ಎಲ್​ .ಆಂಜನೇಯ, ನಿರ್ದೇಶಕ ಎಲ್​.ಉಮಾಶಂಕರ್​ ಇದ್ದರು.

ಟೆಂಡರ್​ ಪ್ರಕ್ರಿಯೆಯಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು: ಸರ್ಕಾರ ಲಂಚಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಆಗುವುದಿಲ್ಲ. ಆದರೆ, ಸಾಧ್ಯವಾದಷ್ಟು ಆತ್ಮಹತ್ಯೆ , ಕೊಲೆಗಳನ್ನು ನಿಲ್ಲಿಸಲು ಕ್ರಮಕೆಗೊಳ್ಳಬೇಕು. ರಾಜಕಾರಣಿಗಳು ಟೆಂಡರ್​ ಪ್ರಕ್ರಿಯೆಯಲ್ಲಿ ಮೂಗು ತೂರಿಸುವುದರಿಂದ ಅರ್ಹ ಗುತ್ತಿಗೆದಾರನಿಗೆ ಕೆಲಸ ಸಿಗುತ್ತಿಲ್ಲ. ಕಾಮಗಾರಿ ಪಡೆಯಲು ಮುಂದಾದರೆ ಮೊದಲೇ ಗುತ್ತಿಗೆದಾರನೊಂದಿಗೆ ಒಪ್ಪಂದ ಆಗಿರುತ್ತದೆ. ಇನ್ನು ಸಚಿವರು, ಶಾಸಕರು ಕೆಲಸ ಮಾಡಿಸಿಕೊಡುವುದಿಲ್ಲ. ಯಾರೇ ಅರ್ಹರಾಗಿದ್ದರು ಗುತ್ತಿಗೆ ಪಡೆಯಲು ಆಗುವುದಿಲ್ಲ. ಆದ್ದರಿಂದ ರಾಜಕಾರಣಿಗಳು ಟೆಂಡರ್​ ಪ್ರಕ್ರಿಯೆಯಲ್ಲಿ ಮೂಗು ತೂರಿಸದಂತೆ ನೋಡಿಕೊಳ್ಳಬೇಕು ಎಂದು ಬೈರೇಗೌಡ ಒತ್ತಾಯಿಸಿದರು.