ಜಿಲ್ಲೆ

ಗುತ್ತಿಗೆ ಪದ್ಧತಿ ರದ್ದುಗೊಳಿಸಲು ಆಗ್ರಹ: ಎಐಯುಟಿಯುಸಿ ಸಮ್ಮೇಳನದಲ್ಲಿ ಹಕ್ಕೊತ್ತಾಯ

ಮಂಜುನಾಥ ತಿಮ್ಮಯ್ಯ

ಮೈಸೂರು: ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಹಾಲಿ ಇರುವ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಎಐಯುಟಿಯುಸಿ 4ನೇ ರಾಜ್ಯ ಸಮ್ಮೇಳನದಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ವಿವಿಧ ಗೊತ್ತುವಳಿ ಮಂಡಿಸಿ ವಿಸ್ತೃತ ಚರ್ಚೆಯನ್ನು ನಡೆಸಿ ಅನುಮೋದಿಸಿ ಮುಂದಿನ ಹೋರಾಟಗಳನ್ನು ಕಟ್ಟಲು ತೀರ್ಮಾನಿಸಲಾಯಿತು.

ಸ್ಕೀಂ ನೌಕರರನ್ನು ಸರ್ಕಾರಿ ನೌಕರರನ್ನು ಪರಿಗಣಿಸಬೇಕು. ದುಡಿಯುವ ಅವಧಿಯನ್ನು ಹೆಚ್ಚಳ ಮಾಡುವ ಸರ್ಕಾರದ ಪ್ರಸ್ತಾಪ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳುವ ನಿರ್ಧಾರವನ್ನು ಖಂಡಿಸಲಾಯಿತು. ಇಎಸ್‌ಐ, ಪಿಎಫ್ ಅರ್ಹತೆಗೆ ಇರುವ ವೇತನದ ಮಿತಿಯನ್ನು ಹೆಚ್ಚಳ ಮಾಡಬೇಕು. ಕನಿಷ್ಠ ಪಿಂಚಣಿಯನ್ನು 10 ಸಾವಿರ ರೂ. ನಿಗದಿಗೊಳಿಸಬೇಕು. ಗಿಗ್ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಅವರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಹಿಸಲಾಯಿತು.

ಸಮಾಜವಾದಿ ಕ್ರಾಂತಿಯೊಂದೇ ಪರಿಹಾರ:

ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಎಐಯುಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಕೆ.ರಾಧಕೃಷ್ಣ ಮಾತನಾಡಿ, ಸಮಾಜದಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತಲೇ ಇವೆ. ಶ್ರಮಿಕರ ಹಿತವನ್ನು ಕಾಯಲು ವಿಫಲವಾಗಿರುವ ಸರ್ಕಾರಗಳು ಬಂಡವಾಳ ಶಾಹಿಗಳಿಗೆ ಆಗಾಧ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತಿದ್ದು, ಅಲ್ಲದೆ ಬಂಡವಾಳಶಾಹಿ ವ್ಯವಸ್ಥೆ ಲಾಭಕ್ಕಾಗಿ ಯುದ್ಧ ಪ್ರಚೋದಿಸುತ್ತವೆ. ಚುನಾವಣೆಗಳಲ್ಲಿ ಪಕ್ಷಗಳನ್ನು ಬದಲಾಯಿಸಿ, ಮತ್ತೊಂದು ಪಕ್ಷವನ್ನು ಚುನಾಯಿಸುವುದರಿಂದ, ಇಂತಹ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕ ವರ್ಗದ ನೇತೃತ್ವದಲ್ಲಿ ಸಮಾಜವಾದಿ ಕ್ರಾಂತಿಯೊಂದೇ ಇದಕ್ಕೆ ಪರಿಹಾರ ಎಂದು ಹೇಳಿದರು.

ಯಾವುದೇ ಚಳವಳಿಗಳಲ್ಲಿ ಏರಿಳಿತಗಳು ಇರುತ್ತವೆ. ಆದರೆ ಅದು ತಾತ್ಕಾಲಿಕ. ಅಂತಿಮವಾಗಿ ಚಳವಳಿಗಳಿಗೆ ಅಂದರೆ ಕ್ರಾಂತಿಕಾರಿ ವಿಚಾರಗಳಿಗೆ ಜಯ ಇರುತ್ತದೆ. ಮೊಟ್ಟಮೊದಲು ಕಾರ್ಮಿಕವನ್ನು ಮುನ್ನಡೆಸುವ ನಾಯಕರು ಸರಿಯಿರಬೇಕು. ವ್ಯಕ್ತಿತ್ವ ಪಾರದರ್ಶಕವಾಗಿರಬೇಕು. ಎಲ್ಲವನ್ನೂ ಬಿಟ್ಟು ಬರಬೇಕು. ನಂತರ ಕಾರ್ಮಿಕರಿಗೆ ಬೋಧನೆ ಮಾಡಬೇಕು. ಆದರೆ ಇದು ಬೇರೆ ಸಂಘಟನೆಗಳಲ್ಲಿ ನಡೆಯುತ್ತಿಲ್ಲ. ನಮ್ಮ ಸಂಘಟನೆಗೂ ಇರುವ ವ್ಯತ್ಯಾಸವಾಗಿದೆ ಎಂದರು.

ನಮ್ಮ ನಾಯಕರಾದ ಕಾ.ಶಿವದಾಸ್ ಘೋಷ್ ಅವರು ಹೇಳಿದಂತೆ ನೈತಿಕ ಬೆನ್ನೆಲುಬು ಮುರಿದು ಹೋದರೆ ಯಾವುದೇ ದೇಶ ಮುನ್ನಡೆಯವುದಿಲ್ಲ. ರೈತರಾಗಲೀ ಕಾರ್ಮಿಕರಾಗಲೀ ನೈತಿಕೆ ಕಳೆದುಕೊಂಡರೆ ಚಳವಳಿಯನ್ನು ಮುನ್ನಡೆಸಲಾಗುವುದಿಲ್ಲ. ನಾನು, ನನ್ನದು ಎಂಬ ಸಂಕುಚಿತ ಮನೋಭಾವವನ್ನು ಕಾರ್ಮಿಕ ಮುಖಂಡರು ತೊರೆಯಬೇಕು. ಆಗ ಮಾತ್ರವೇ ಕಾರ್ಮಿಕ ಹೋರಾಟ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಮಿಕರು ಚಿಂತಿಸಬೇಕು ಎಂದು ಹೇಳಿದರು.

ಕಾರ್ಮಿಕರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ: 

ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರ್‌ದಾಸ್ ಗುಪ್ತ ಮಾತನಾಡಿ, ಕಾರ್ಮಿಕರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಶೋಷಕರ ಶೋಷಣೆ ದಬ್ಬಾಳಿಕೆ ಜಾಸ್ತಿಯಾಗುತ್ತಿರುವಂತೆಯೇ ಜನ ಜೀವನದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಈ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣ ಎಂದು ಹೇಳಿದರು.

ನಮ್ಮ ಹೋರಾಟಗಳನ್ನು ಆರ್ಥಿಕ ಬೇಡಿಕೆಗಳಿಗೆ ಮಾತ್ರ ಸಿಮೀತಗೊಳಿಸದೇ ಇಡೀ ವ್ಯವಸ್ಥೆಯನ್ನು ಬದಲಾಯಿಸುವ ಗುರಿಯನ್ನಿಟ್ಟುಕೊಂಡು ಹೋರಾಟವನ್ನು ಕಟ್ಟಬೇಕು. ಇದಕ್ಕಾಗಿ ಈ ಯುಗದ ಒಬ್ಬ ಮಹಾನ್ ಮಾರ್ಕ್ಸ್‌ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ ಅವರ ಚಿಂತನೆಯ ಆಧಾರದ ಮೇಲೆ ಉನ್ನತ ನೈತಿಕತೆ, ಉದಾತ್ತ ರಾಜಕೀಯ ಚಿಂತನೆ ಮತ್ತು ಸಾಂಸ್ಕೃತಿಕ ಮೌಲ್ಯ ಬೆಳೆಸಿಕೊಂಡು ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.

ನ್ಯಾಯಯುತವಾಗಿ ಕಾರ್ಮಿಕರಿಗೆ ಕೊಡಬೇಕಾಗಿ ಪಾಲನ್ನು ವಂಚನೆ

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ಕಾರ್ಮಿಕರ ಕಠಿಣ ಪರಿಶ್ರಮದ ಫಲವಾಗಿ ಕಾರ್ಖಾನೆಯ ಮಾಲೀಕರ ಸಂಪತ್ತು ಹೆಚ್ಚಳವಾಗುತ್ತಿದೆ. ಆದರೆ ನ್ಯಾಯಯುತವಾಗಿ ಕಾರ್ಮಿಕರಿಗೆ ಕೊಡಬೇಕಾಗಿ ಪಾಲನ್ನು ವಂಚಿಸಲಾಗುತ್ತಿದೆ. ಇದನ್ನು ಮೊದಲ ಬಾರಿಗೆ ವೈಜ್ಞಾನಿಕವಾಗಿ ನಿರೂಪಿಸಿ, ವರ್ಗ ಹೋರಾಟಕ್ಕೆ ಕರೆ ನೀಡಿದವರು ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಎಂದರು.

ಕಾಲ್‌ಮಾರ್ಕ್ಸ್ ಅವರು ವಿಶ್ವದ ಕಾರ್ಮಿಕರೇ ಒಂದಾಗಿ, ಹೋರಾಟಕ್ಕಾಗಿ ಮುಂದಾಗಿ ಎಂದು ಕರೆ ನೀಡಿದ್ದರು. ಈ ಕರೆಗೆ ಬೆಚ್ಚಿದ ಬಂಡವಾಳಶಾಹಿ ಮಾಲೀಕರು ಮತ್ತವರ ಪ್ರತಿನಿಧಿಗಳು ಕಾರ್ಮಿಕರು, ಶೋಷಿತರು ಒಂದಾಗಿ ಹೋರಾಟಗಳನ್ನು ಬೆಳೆಸುತ್ತಾರೆ ಎಂಬ ಭಯದಿಂದ ಅಶ್ಲೀಲತೆ, ಕೋಮುವಾದ, ಜಾತೀವಾದ, ದುಶ್ಚಟಗಳಿಗೆ ಉತ್ತೇಜನ ಕೊಡುತ್ತಿದ್ದಾರೆ. ಇಡೀ ಶ್ರಮಿಕ ವರ್ಗ ಇಂತಹ ಹೀನ ತಂತ್ರವನ್ನು ಹಿಮ್ಮೆಟ್ಟಿಸಿ, ವೈಚಾರಿಕ ತಿಳವಳಿಕೆಯನ್ನು ಪಡೆದುಕೊಂಡು ತಮ್ಮ ಹಕ್ಕಿನ ಪಾಲನ್ನು ಪಡೆಯಲು ಬಲಿಷ್ಠ ಹೋರಾಟವನ್ನು ಕಟ್ಟಲು ಮುಂದಾಗಬೇಕು ಎಂದು ಹೇಳಿದರು.

ಮುಖಂಡರಾದ ಕೆ.ಸೋಮಶೇಖರ್, ಚಂದ್ರಶೇಖರ್ ಮೇಟಿ, ಕೆ.ಸೋಮಸೇಖರ್ ಯಾದಗಿರಿ ಇನ್ನಿತರರಿದ್ದರು

ರಾಜ್ಯ ಸಮಿತಿ ಆಯ್ಕೆ:

ಎಐಯುಟಿಯುಸಿ ಮುಂದಿನ ಹೋರಾಟಗಳಿಗೆ ನಾಯಕತ್ವವನ್ನು ನೀಡಲು ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಕೆ.ಸೋಮಶೇಖರ್ ಬಳ್ಳಾರಿ(ಅಧ್ಯಕ್ಷ), ಕೆ.ವಿ.ಭಟ್, ದೇವದಾಸ್, ಡಿ.ನಾಗಲಕ್ಷ್ಮೀ, ಎಂ.ಉಮಾದೇವಿ, ವೀರೇಶ್ ಎನ್.ಎಸ್, ಚಂದ್ರಶೇಖರ ಮೇಟಿ, ರಮಾ ಟಿ.ಸಿ, ಷಣ್ಮುಗಂ ಪಿ.ಎಸ್, ತಾಯಿದಾಸ್, ಎಚ್.ಟಿ.ಮಲ್ಲಿಕಾರ್ಜುನ್, ಮಂಜುನಾಥ್ ಕೈದಾಳೆ(ಉಪಾಧ್ಯಕ್ಷರು), ಕೆ. ಸೋಮಶೇಖರ್ ಯಾದಗಿರಿ (ರಾಜ್ಯ ಕಾರ್ಯದರ್ಶಿ), ಡಿ.ಉಮಾದೇವಿ, ವಿ.ಜಿ. ದೇಸಾಯಿ, ಎಸ್.ಎಂ ಶರ್ಮಾ, ಜಿ. ಹನುಮೇಶ್, ಗಂಗಾಧರ್ ಬಡಿಗೇರ್, ಡಾ.ಪ್ರಮೋದ್, ಸಂಧ್ಯಾ ಪಿ.ಎಸ್, ಮಂಜುನಾಥ್ ಕುಕ್ಕವಾಡ, ಮಹೇಶ್ ನಾಡಗೌಡ ಮತ್ತು 33 ಕಾರ್ಯಕಾರಿ ಸದಸ್ಯರು, ಕೌನ್ಸಿಲ್ ಸದಸ್ಯರನ್ನು ಒಳಗೊಂಡ 171 ಜನರ ಸಮಿತಿಯನ್ನು ರಚಿಸಲಾಯಿತು.