ಜಿಲ್ಲೆ

ಗುಣಾತ್ಮಕ ಗಣಿತ ಕಲಿಕೆಗೆ ಆ್ಯಪ್ ಸಹಕಾರಿ

ಚಿತ್ರದುರ್ಗ: ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಗಣಿತದ ಮೂಲಕ್ರಿಯೆಗಳನ್ನು ಆಟದ ಮೂಲಕ ಕಲಿಯಲು ಅಕ್ಷರ ಫೌಂಡೇಶನ್ ತಯಾರಿಸಿರುವ ಬಿಲ್ಡಿಂಗ್ ಬ್ಲಾಕ್ಸ್‌ ಆ್ಯಪ್ ಸಹಕಾರಿಯಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ಡಯಟ್‌ನಲ್ಲಿ ಆ್ಯಪ್ ಸಂಬಂಧ ಭಾನುವಾರ ಮಾಹಿತಿ ನೀಡಿದ ಅವರು, ಮಕ್ಕಳಿಗಾಗಿಯೇ ಹೊರತಂದಿರುವ ಈ ಪ್ರಯೋಗಾತ್ಮಕ ಆ್ಯಪ್ ಎಲ್ಲ ಆಂಡ್ರಾಯ್ಡ್ ಮೊಬೈಲ್‌ಗಳಲ್ಲೂ ಲಭ್ಯ ಎಂದರು.

ಪಠ್ಯಾಧಾರಿತ 1ರಿಂದ 5ನೇ ಮತ್ತು 6ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಗಣಿತ ಕಲಿಕೆಗೆ 2 ವಿಭಾಗದಲ್ಲಿ ಅವಕಾಶ ನೀಡಲಾಗಿದ್ದು, ಚಟುವಟಿಕೆ ಆಧಾರಿತ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಆಟದ ಮೂಲಕ ಅಭ್ಯಾಸಿಸುವುದರಿಂದ ಕಲಿಕಾಭಿವೃದ್ಧಿಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ನೋಡಲ್ ಅಧಿಕಾರಿ ಬಿ.ಎಸ್.ನಿತ್ಯಾನಂದ ಮಾತನಾಡಿ, ಮಕ್ಕಳಿಗೆ ಗಣಿತದಲ್ಲಿ ಪರಿಣಿತಿ ಪಡೆಯಲು ಬೇಕಾದ ಕೌಶಲ ಮತ್ತು ಆತ್ಮಸ್ಥೈರ್ಯ ಮೂಡಿಸಲು ಸಾಂಪ್ರದಾಯಿಕ ಕಲಿಕೆಗೆ ವಿಭಿನ್ನವಾಗಿ ಈ ಆ್ಯಪ್ ಸಿದ್ಧಪಡಿಸಲಾಗಿದೆ. ಈ ತಂತ್ರಾಂಶ ಉಚಿತವಾಗಿದ್ದು, ಪ್ಲೇ ಸ್ಟೋರ್ ಮತ್ತು ದೀಕ್ಷಾ ಆ್ಯಪ್‌ನಲ್ಲೂ ಲಭ್ಯ ಎಂದರು.

ಶಾಲಾ ಕಲಿಕೆಗೆ ಹೊಂದಿಕೊಂಡ ಪಠ್ಯಕ್ರಮ ಮತ್ತು ಬಳಕೆದಾರ ಸ್ನೇಹಿ ಫ್ಯೂಚರ್‌ಗಳೊಂದಿಗೆ ಆ್ಯಪ್ ವಿದ್ಯಾರ್ಥಿಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಎಲ್ಲ ಮಕ್ಕಳಲ್ಲೂ ಗಣಿತದ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ಅಕ್ಷರ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕ ಹನುಮಂತರಾಯ ಕಣ್ಣಿ ಮಾತನಾಡಿ, ಫೌಂಡೇಶನ್ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಮಕ್ಕಳ ಕಲಿಕಾ ಚಟುವಟಿಕೆಯಲ್ಲಿ ಪೂರಕವಾಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದೆ. ಶಾಲಾ ಪಠ್ಯಕ್ರಮದ ಜೊತೆಗೆ ಗಣಿತದ ಪ್ರಮುಖ ಪರಿಕಲ್ಪನೆಗಳನ್ನು ಅಭಿರುಚಿಗೆ ತಕ್ಕಂತೆ, ಆಸಕ್ತಿದಾಯಕ ಹಾಗೂ ಉಲ್ಲಾಸದಿಂದ ಕೂಡಿರುವಂತೆ ಸಿದ್ಧಪಡಿಸಲಾಗಿದೆ. 400ಕ್ಕೂ ಹೆಚ್ಚು ಸಂವಾದಾತ್ಮಕ ಆಟಗಳನ್ನು ಒಳಗೊಂಡಿದೆ ಎಂದರು.

ಉಪನ್ಯಾಸಕರಾದ ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಇತರರಿದ್ದರು.