ಜಿಲ್ಲೆ

ಗುಣಮಟ್ಟವಿಲ್ಲದ ಸಂಶೋಧನೆಗಳು

ಮೈಸೂರು; ಇತ್ತೀಚಿನ ವಿದ್ಯಾರ್ಥಿಗಳು ಮತ್ತು ಸಾಹಿತಿಗಳು, ಲೇಖಕರಿಂದ ಗುಣಮಟ್ಟದ ಸಂಶೋಧನೆ ಆಗುತ್ತಿಲ್ಲ ಎಂದು ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಕಳವಳ ವ್ಯಕ್ತಪಡಿಸಿದರು.


ಮಹಾಜನ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿ ಕನ್ನಡ ಅಧ್ಯಾಪಕರ ಸಂಘದ ಸಹಯೋಗದಲ್ಲಿ ನಗರದ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕಿ ಡಾ.ಬಿ.ಆರ್.ಜಯಕುಮಾರಿ ಅವರ ‘ಬೇರಿಗಿಳಿದ ನೀರು’ (ಡಾ.ಎಚ್.ಜೆ.ಲಕ್ಕಪ್ಪಗೌಡರ ಬದುಕು ಮತ್ತು ಬರಹ)ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಆಧುನಿಕ ಯುಗದಲ್ಲಿ ಅಧ್ಯಯನ ಹಿಂದೆ ಸರಿಯುತ್ತಿದೆ. ವಿಶ್ವವಿದ್ಯಾಲಯಗಳಂತೂ ಸಂಶೋಧನೆಗಳಿಂದ ದೂರವೇ ಉಳಿದಿವೆ. ಕುವೆಂಪು, ಬೇಂದ್ರೆ, ಅಡಿಗ ಹೀಗೆ ವಿದ್ವಾಂಸರ ಸಾಹಿತ್ಯಗಳನ್ನು ಸಮಗ್ರವಾಗಿ ಮತ್ತು ಪರಿಪೂರ್ಣವಾಗಿ ಓದುತ್ತಿಲ್ಲ. ಅಲ್ಪ ಓದಿ ಅವರ ಬಗ್ಗೆ ಮಾತನಾಡುವ ಕೆಟ್ಟಪ್ರವೃತ್ತಿ ಇತ್ತೀಚಿಗೆ ಹೆಚ್ಚಾಗಿದೆ. ಇದು ಸರಿಯಲ್ಲ. ಹೀಗಾಗಿ ಸಮೃದ್ಧ ಸಾಹಿತ್ಯದ ಅಧ್ಯಯನ ಮಾಡಬೇಕು ಎಂದರು.


ರಾಜಕಾರಣಿಗಳು ಪುಸ್ತಕಗಳ ದ್ವೇಷಿಗಳಾಗಿದ್ದಾರೆ. ಇದರಿಂದಾಗಿ ರಾಜಕೀಯ ಮತ್ತು ಧರ್ಮ ಭ್ರಷ್ಟವಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮಾತ್ರ ಸಮಾಜವನ್ನು ಸಂರಕ್ಷಣೆ ಮಾಡಬಹುದಾಗಿದೆ. ಇದಕ್ಕಾಗಿ ಅಧ್ಯಯನ ಮತ್ತು ಬರವಣಿಗೆ ಅಗತ್ಯ ಇದೆ ಎಂದರು.


ಗ್ರಾಮೀಣ ಸಂಸ್ಕೃತಿಯನ್ನು ಸಾಹಿತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತಬೇಕು. ಅಕ್ಷರಲೋಕದಲ್ಲಿ ಇದನ್ನು ಪಸರಿಸುವ ಮೂಲಕ ಕೂಡಿ ಬಾಳುವ ಸಂಸಕ್ಕತಿಯನ್ನು ಸಾರಬೇಕು. ಒತ್ತಡದ ಕಾರಣದಿಂದ ಲೇಖಕರು ಬರವಣಿಗೆಯನ್ನು ನಿಲ್ಲಿಸಬಾರದು. ಡಾ.ಎಚ್.ಜೆ.ಲಕ್ಕಪ್ಪಗೌಡರು ನವೋದಯ ಸಾಹಿತ್ಯ ಪರಂಪರೆಯವರು. ಇವರು ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಜಾನಪದ, ವಿಮರ್ಶೆ, ಕಾವ್ಯ ಮೀಮಾಂಸೆ ಮುಂತಾದಗಳಲ್ಲಿ ಪಾಂಡಿತ್ಯ ಹೊಂದಿದವರು. ಲಕ್ಕಪ್ಪಗೌಡರ ಸಾಹಿತ್ಯವನ್ನು ಡಾ.ಜಯಕುಮಾರಿ ಅವರು ಓದಿ ಈ ಕೃತಿಯನ್ನು ರಚಿಸಿದ್ದಾರೆ ಎಂದರು.


ಕೃತಿ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿದರು. ಶಾಸಕ ಸಿ.ಎಸ್.ಪುಟ್ಟರಾಜು, ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ, ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್, ಕನ್ನಡ ಪ್ರಾಧ್ಯಾಪಕ ಡಾ.ಎ.ರಂಗಸ್ವಾಮಿ, ಮಣಿ ಪ್ರಕಾಶನದ ಎಚ್.ಕೆ.ಮಂಜೇಗೌಡ, ಲೇಖಕಿಯೂ ಆದ ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಕನ್ನಡ ವಿಭಾಗದ ಮುಖ್ಯ ಡಾ.ಎಚ್.ಆರ್.ತಿಮ್ಮೇಗೌಡ ಪಾಲ್ಗೊಂಡಿದ್ದರು.