ಮಳವಳ್ಳಿ: ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಉತ್ಪಾದಕರು ಉತ್ತಮ ಬೆಲೆ ಪಡೆಯುವುದರ ಜತೆಗೆ ಸಹಕಾರ ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಬಹುದು ಎಂದು ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ತಿಳಿಸಿದರು.
ತಾಲೂಕಿನ ರಾಗಿಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಅನ್ನದಾತರು ಜೀವನ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇನ್ನೂ ಕೆಲವು ರೈತರು ದೊಡ್ಡ ಮಟ್ಟದಲ್ಲಿ ಹೈನೋದ್ಯಮ ಮಾಡಿಕೊಂಡಿದ್ದಾರೆ. ಗುಣಮಟ್ಟದ ಹಾಲು ಪೂರೈಕೆಯೇ ಈ ಉದ್ಯಮದ ಆಧಾರ ಸ್ತಂಭವಾಗಿದೆ. ಆದ್ದರಿಂದ ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಹಕಾರ ಸರಪಳಿಯನ್ನು ಸದೃಢಗೊಳಿಸಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಶಿವಪ್ರಕಾಶ್ ವಾರ್ಷಿಕ ವರದಿ ಮಂಡಿಸಿ, 2024-25ನೇ ಸಾಲಿನಲ್ಲಿ ಸಂಘದ ನೋಂದಾಯಿತ ಸದಸ್ಯರ ಸಹಕಾರದಿಂದ ಪ್ರಸ್ತುತ ಉತ್ತಮ ವಹಿವಾಟು ನಡೆಸುವ ಮೂಲಕ ನಿವ್ವಳ 9,25,321 ರೂ. ಆದಾಯ ಗಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚು ಹಾಲು ಪೂರೈಸಿದ ಆರ್.ಪಿ.ಪ್ರವೀಣ್ ಕುಮಾರ್, ಆರ್.ಸಿ.ಶಿವರುದ್ರಪ್ಪ, ನಿಂಗರಾಜು ಮತ್ತು ಗುಣಮಟ್ಟದ ಹಾಲು ಸರಬರಾಜು ಮಾಡಿದ ಪ್ರಭುಸ್ವಾಮಿ, ಆರ್.ಎಂ.ಮಹೇಶ್, ಶಿವಣ್ಣ ಅವರನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ಸುಧಾ, ಮನ್‌ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಉಪ ಕಚೇರಿ ವಿಸ್ತರಣಾಧಿಕಾರಿ ಎ.ಎನ್.ರವೀಶ್, ಡಾ.ಸದಾಶಿವ, ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚೌಡೇಗೌಡ, ಸಂಘದ ನಿರ್ದೇಶಕರು ಇದ್ದರು.