ಚನ್ನರಾಯಪಟ್ಟಣ: ಪಾರದರ್ಶಕ ಕಡತ ನಿರ್ವಹಣೆ, ತ್ವರಿತಗತಿ ವಿಲೇವಾರಿ, ಕಡತ ಕಣ್ಮರೆ ತಡೆ, ತಿದ್ದುಪಡಿ ಸಮಸ್ಯೆ ಇತರ ಉದ್ದೇಶಕ್ಕಾಗಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಇ-ಆಫೀಸ್ ಕಚೇರಿಯನ್ನು ತೆರೆಯಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಇ-ಆಫೀಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಇ-ಆಫೀಸ್ ತಂತ್ರಾಂಶದ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚನ್ನರಾಯಪಟ್ಟಣದಲ್ಲಿ ಇ- ಆಫೀಸ್ ತಂತ್ರಾಂಶ ಅಳವಡಿಕೆಯಾಗಿದ್ದು, ಆ ಮೂಲಕವೇ ಕಾರ್ಯನಿರ್ವಹಣೆ ಮಾಡಲಾಗುವುದು. ಕಚೇರಿಗೆ ಬರುವ ಎಲ್ಲ ಕಾಗದಪತ್ರಗಳನ್ನು ಆರಂಭದಲ್ಲಿ ಸ್ಕ್ಯಾನ್ ಮಾಡಿ ಇ-ಆಫೀಸ್ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬೇಕು. ನಂತರ ಸ್ಕ್ಯಾನ್ ಆದ ಪ್ರತಿಗಳು ಮುಂದಿನ ಟೇಬಲ್ಗೆ ರವಾನೆಯಾಗುತ್ತವೆ. ಪ್ರಸ್ತುತ ಕಡತ ಯಾರ ಬಳಿ, ಯಾವ ಹಂತದಲ್ಲಿವೆ, ಎಷ್ಟು ದಿನಗಳಿಂದ ಉಳಿದಿವೆ ಮುಂತಾದ ಮಾಹಿತಿಯನ್ನು ಕುಳಿತಲ್ಲಿಯೇ ನೋಡಬಹುದು. ಇದರಿಂದ ಮೇಲಧಿಕಾರಿಗಳು ಸಂಬಂಧಪಟ್ಟವರಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಕುಳಿತಲ್ಲಿಯೇ ಮಾಡಲು ಸಹಾಯಕವಾಗುತ್ತದೆ ಎಂದರು.
ಈ ಮೊದಲು ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರ ಹಿಡಿದು ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಒಮ್ಮೊಮ್ಮೆ ಕಡತ ನಾಪತ್ತೆ ಆಗಿ ವರ್ಷಗಳೇ ಕಳೆದರೂ ಸಿಗದ ಹಲವು ಉದಾಹರಣೆಗಳಿವೆ. ಈ ಸಮಸ್ಯೆ ದೂರ ಮಾಡಲು ತಂತ್ರಾಂಶ ಸಹಕರಿಯಾಗಲಿದೆ ಎಂದರು.
ತಹಸೀಲ್ದಾರ್ ಸಿ.ಜಿ.ಗೀತಾ ಮಾತನಾಡಿ, ತಾಲೂಕು ಕಚೇರಿಯಲ್ಲಿ ತೆರೆಯಲಾಗಿರುವ ಇ-ಕಚೇರಿ ಕೇಂದ್ರವು ಸಾರ್ವಜನಿಕರಿಗೆ ತಮ್ಮ ಕಡತಗಳ ವಿಲೇವಾರಿಯನ್ನು ಶೀಘ್ರವಾಗಿ ನಿಭಾಯಿಸುವ ಕೆಲಸ ಮಾಡುತ್ತದೆ. ತಾವು ನೀಡಿದ ಅರ್ಜಿ ಯಾವ ಹಂತದಲ್ಲಿದೆ, ಎಷ್ಟು ದಿನಗಳಲ್ಲಿ ವಿಲೇವಾರಿಯಾಗುತ್ತದೆ ಎಂಬುದಾಗಿ ತಮ್ಮ ಮೊಬೈಲ್‌ಗಳಲ್ಲಿ ತಿಳಿಯಬಹುದು. ಇ-ಕಚೇರಿಯು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಶಾಸಕರು ಎರಡು ಹೆಚ್ಚುವರಿ ಕಂಪ್ಯೂಟರ್, ಯುಪಿಎಸ್ ಮತ್ತು ಸ್ಕ್ಯಾನರ್ ಕೊಡಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ನಾಡಕಚೇರಿಯಲ್ಲಿ ಇ- ಆಫೀಸ್ ತಂತ್ರಾಂಶವನ್ನು ಅಳವಡಿಸಲಾಗುವುದೆಂದು ತಿಳಿಸಿದರು.
ಎಡಿಎಲ್ಆರ್ ಲಲ್ಲೂ ಪ್ರಸಾದ್, ಗ್ರೇಡ್-2 ತಹಸೀಲ್ದಾರ್ ನಾಗರಾಜು, ಶಿರಸ್ತೇದಾರ್ ಪವನ್, ಪೂರ್ಣಿಮಾ, ರವಿಕುಮಾರ್, ಕಸಬಾ ರಾಜಸ್ವ ನಿರೀಕ್ಷಕ ಮಂಜುನಾಥ್, ವಳಗೇರಹಳ್ಳಿ ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.