ಜಿಲ್ಲೆ

ಗುಣಮಟ್ಟದ ಶಿಕ್ಷಣದತ್ತ ಯೋಚನೆ ಇರಲಿ

ಭಟ್ಕಳ: ಶಿಕ್ಷಕರಾಗಬೇಕಿರುವ ನೀವು ನಿಮ್ಮ ವೃತ್ತಿಯ ಪ್ರತಿ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕುರಿತು ಯೋಚಿಸಬೇಕು. ಪಾಠದ ಪ್ರಾರಂಭದಲ್ಲಿ ಪುನರಾವರ್ತನೆ ಮಾಡಿಕೊಳ್ಳಬೇಕು ಮತ್ತು ಪಾಠದ ಕೊನೆಯಲ್ಲಿ ಮೌಲ್ಯಮಾಪನ ಮಾಡುವುದು ಮಹತ್ವದ್ದಾಗಿದೆ ಎಂದು ಭಟ್ಕಳದ ಕಿತ್ತೂರು ರಾಣಿ ಚನ್ನಮ್ಮಾ ವಸತಿ ಶಾಲೆಯ ವಿಜ್ಞಾನ ಶಿಕ್ಷಕ ವಿಜಯ ಮೊಗೇರ ಹೇಳಿದರು.

ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಬಹುಮಾನ ವಿತರಣೆ ಮತ್ತು ದೀಪದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಟ್ಕಳ ಎಜುಕೇಷನ್ ಟ್ರಸ್ಟ್ ಚೇರ್ಮನ್ ಡಾ. ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಾ. ಅಜಾತಸ್ವಾಮಿ ಅವರ ತಂದೆಯವರಾದ ದಿ. ಎಚ್.ಎನ್.ಜಿ. ಮೂರ್ತಿಯವರ ಹೆಸರಿನಲ್ಲಿ ನೀಡುವ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಭವ್ಯಾ ಕುರಾಡೆ, ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ರಶ್ಮಿ ಎ. ಆರ್. ಅವರು, ಮಹಾವಿದ್ಯಾಲಯ ನೀಡುವ ಉದಯೋನ್ಮುಖ ಭಾವಿ ಶಿಕ್ಷಕಿ ಪ್ರಶಸ್ತಿಯನ್ನು ಪ್ರಶಿಕ್ಷಣಾರ್ಥಿ ಅನುಶ್ರೀ ಪಡೆದುಕೊಂಡರು. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಾಂಶುಪಾಲ ಡಾ ವೀರೇಂದ್ರ ವಿ. ಶಾನಭಾಗ, ವಿಶ್ವನಾಥ ಮಹಾಲೆ, ಉಪನ್ಯಾಸಕ ನಾಗರಾಜ ಮಡಿವಾಳ ಮತ್ತು ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಜಗದೀಶ ಹರಿಕಾಂತ, ಇತರರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಮೈನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.