ಜಿಲ್ಲೆ

ಗುಣಮಟ್ಟದ ಶಿಕ್ಷಣ ಭಾರತೀ ವಿದ್ಯಾಸಂಸ್ಥೆಯ ಹೆಗ್ಗಳಿಕೆ

ಕೆ.ಎಂ.ದೊಡ್ಡಿ: ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಭಾರತೀ ವಿದ್ಯಾಸಂಸ್ಥೆಯ ಹೆಗ್ಗಳಿಕೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ.ಜೆ. ಮಹೇಂದ್ರ ತಿಳಿಸಿದರು.


ಇಲ್ಲಿನ ಭಾರತೀ ಔಷಧ ವಿಜ್ಞ್ಞಾನ ಕಾಲೇಜಿನ ಪದವಿ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ದುಬಾರಿ ಹಣ ನೀಡಿ ಶಿಕ್ಷಣ ಪಡೆಯಬೇಕಾದ ಪರಿಸ್ಥಿತಿಯಲ್ಲೂ ಹಳ್ಳಿಗಾಡಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಿಇಟಿ ಸಂಸ್ಥೆ ಶಿಕ್ಷಣ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.


ಮಾಜಿ ಸಂಸದ ಜಿ.ಮಾದೇಗೌಡ ಅವರು ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಂಕಲ್ಪ ತೊಟ್ಟು ಕುಗ್ರಾಮ ಕೆ.ಎಂ.ದೊಡ್ಡಿಯಲ್ಲಿ ಶಿಕ್ಷಣ ಸಂಸ್ಥೆ ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದರೆ. ಇದಲ್ಲದೆ ಬಿಇಟಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗದಲ್ಲಿರುವುದು ಸಂಸ್ಥೆ ಸಾಧನೆಯ ಗರಿ ವಿದೇಶದಲ್ಲೂ ಕಂಪಿಸಿದೆ ಎಂದರು.


ಔಷಧ ವಿಜ್ಞಾನದಲ್ಲಿ ಪದವಿ ಪಡೆದ ವಿದ್ಯಾಥಿಗಳು ಸಹ ವೈದ್ಯಕೀಯ ಶಿಕ್ಷಣದಷ್ಟೇ ಮಹತ್ವ ಪಡೆದುಕೊಂಡಿದೆ. ಹಳ್ಳಿಗಾಡಿನ ಜನತೆ ಇಂತಹ ಕೋರ್ಸ್‌ಗಳ ಮಾಹಿತಿ ಪಡೆದು ಮಕ್ಕಳನ್ನು ಸೇರಿಸುವ ಮೂಲಕ ಸಾರ್ವಜನಿಕ ಸೇವೆಗಳಿಗೆ ಅವಕಾಶ ಕಲ್ಪಿಸಿ ಎಂದರು.


ಬಿಇಟಿ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಔಷಧ ವಿಜ್ಞಾನಕ್ಕೆ ಬಾರಿ ಬೇಡಿಕೆ ಇದ್ದು, ಕಾಲೇಜಿನಲ್ಲಿ ಉತ್ತಮ ಬೋಧಕ ವರ್ಗವನ್ನು ಹೊಂದಿದ್ದು ಬೋಧನಾ ವಿಷಯದಲ್ಲಿ ಯಾವುದೇ ರಾಜೀ ಇಲ್ಲದೆ ಶಿಕ್ಷಣ ಕಲಿಸಬೇಕು. ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕು ಎಂದು ಕಿವಿಮಾತು ಹೇಳಿದರು.


ಭಾರತೀ ಹೆಲ್ತ್ ಸೈನ್ಸ್ ವಿಭಾಗದ ನಿರ್ದೇಶಕ ಡಾ.ಟಿ.ತಮಿಜ್‌ಮಣಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ, ಬಿಇಟಿ ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಭಾರತೀ ಔಷಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಬಾಲಸುಬ್ರಮಣ್ಯಂ, ಉಪಪ್ರಾಂಶುಪಾಲ ಸಿ.ಎಚ್. ಸೋಮಶೇಖರ್, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಸ್. ಸುರೇಶ್, ಎಸ್. ಪ್ರಾರ್ಥಿಬನ್, ಡಾ.ವಿಘನೇಶ್ವರಿ, ಡಾ.ಶೀಜು, ಡಾ.ಜೋಷ್ ಜ್ಞಾನಬಾನು, ಡಾ.ಪ್ರಮೀಳಾ, ಸ್ವರೂಪ ಸತ್ಯ, ರಶ್ಮಿ ಇತರರಿದ್ದರು.