ಹೂವಿನಹಿಪ್ಪರಗಿ: ಕೇವಲ ಬದುಕಲು ಆಸ್ತಿಯನ್ನು ಮಾಡಿದಲ್ಲಿ ಒಂದಿಲ್ಲೊಂದು ದಿನ ನಶಿಸಿ ಹೋಗಬಹುದು. ಆದರೆ ಶಾಶ್ವತವಾಗಿ ಉಳಿಯಬಲ್ಲ ಶಿಕ್ಷಣದ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದಲ್ಲಿ ದೇಶಕ್ಕೆ ಮಾದರಿಯಾಗಬಲ್ಲರು ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಭಾನುವಾರ ಸಮೀಪದ ಕಾಮನಕೇರಿ ಗ್ರಾಮದಲ್ಲಿ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮ ಸಮಿತಿಯ ಸಿದ್ಧಲಿಂಗೇಶ್ವರ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಸಾಧನೆಗೆ ಶಿಕ್ಷಣ ಅವಶ್ಯಕವಾಗಿದೆ. ಮೊದಲು ದೇಶ ಕೃಷಿ ಅವಲಂಬಿತವಾಗಿತ್ತು. ಆದರೆ ಸದ್ಯದ ದಿನಮಾನಗಳಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ಪ್ರತಿಭಾವಂತರಾಗಿ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವಿದೇಶಿ ವಿನಿಮಯದಿಂದ ದೇಶ ಮುನ್ನಡೆಯುವಂತಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಭಂಥನಾಳದ ಸಂಗನಬಸವ ಸ್ವಾಮಿಗಳ ಶಿಕ್ಷಣದ ಕ್ರಾಂತಿಯ ಮೂಲಕ ಬಿಎಲ್‌ಡಿಇ ಸಂಸ್ಥೆ ತಲೆಯತ್ತಿದೆ. ಅದೇ ರೀತಿ ಕಾಮನಕೇರಿಯ ಪರಮಾನಂದ ಮಹಾರಾಜರೂ ಕೂಡ ಶಿಕ್ಷಣ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣಕ್ಕಾಗಿ ದೂರದ ಪ್ರದೇಶಗಳಿಗೆ ತೆರಳುವದನ್ನು ತಪ್ಪಿಸಲು ಶಿಕ್ಷಣ ಸಂಸ್ಥೆ ತೆರೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ನೆಮ್ಮದಿ ಪ್ರಾಪ್ತವಾಗಲು ಪುಣ್ಯಾಶ್ರಮ ಪೂರಕವಾಗಿದೆ. ಶಿಕ್ಷಣ ಕ್ರಾಂತಿಗಾಗಿ ಸಂಸ್ಥೆ ಉತ್ಸುಕವಾಗಿದ್ದು ಗುಣಮಟ್ಟದ ಶಿಕ್ಷಣ, ಸಂಸ್ಕಾರಕ್ಕಾಗಿ ಸಂಸ್ಥೆ ಮಾದರಿಯಾಗಲಿ ಎಂದರು. ಸಾನ್ನಿಧ್ಯ ವಹಿಸಿದ್ದ ಯರನಾಳದ ಗುರುಸಂಗನಬಸವ ಶ್ರೀಗಳು, ಮುಖಂಡ ಸಂಗಮೇಶ ಓಲೇಕಾರ ಮಾತನಾಡಿದರು.
ಶಿಕ್ಷಣ ಸಂಸ್ಥೆ ಕಾಮನಕೇರಿಯ ಪರಮಾನಂದ ಮಹಾರಾಜರು, ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಬಸವರಾಜ ಸೊಂಪುರ, ಗುರುನಗೌಡ ಪಾಟೀಲ, ಕಲ್ಲಪ್ಪ ಮಟ್ಟಿ, ಸೋಮಣ್ಣ ಹೆಗಡ್ಯಾಳ, ಬಿ.ಟಿ. ಗೌಡರ, ಶರಣಪ್ಪ ಬಳ್ಳಾವುರ, ಶ್ರೀಶೈಲ ಚಾಂದಕೋಟಿ ಇತರರಿದ್ದರು. ಶಿಕ್ಷಕ ಅರವಿಂದ ಗಂಗೂರ ಸ್ವಾಗತಿಸಿದರು. ಜಕ್ಕಣ್ಣ ಮಾಸ್ತರ ನಿರೂಪಿಸಿದರು.