ಬಾಗಲಕೋಟೆ: ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ನಾಯಕತ್ವದಿಂದ ಕಾಲೇಜು ಬೆಳವಣಿಗೆ ಸಾಧ್ಯವಾಗಿದ್ದು, ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರ ಭೇಟಿ ನೀಡಿದ ಅವರು, ಇಲ್ಲಿ ಅಂದಾಜು ೨೮೦೦ ಸಾವಿರ ವಿದ್ಯಾರ್ಥಿಗಳು ವಿವಿಧ ಕೋರ್ಸಗಳಲ್ಲಿ ಓದುತ್ತಿರುವುದು ಸಂತಸ ತಂದಿದೆ. ಇಲ್ಲಿ ಪದವಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯ ಪಡೆಯಲು ಪೂರಕವಾಗಿ ನಮ್ಮ ಅನುದಾನದಲ್ಲಿ ೫೦ ಕಂಪ್ಯೂಟರ್‌ಗಳನ್ನು ನೀಡಲು ಭರವಸೆ ನೀಡಿದರು.
ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೆಶ ಪಡೆಯಲು ವಿದ್ಯಾರ್ಥಿಗಳ ಸಾಲುಗಟ್ಟಿ ನಿಂತಿರುವುದು ನೋಡಿದರೆ ಇಲ್ಲಿ ಉತ್ತಮ ಆಡಳಿತ, ಗುಣಮಟ್ಟದ ಬೋಧನೆ, ಓದಲು ಪ್ರಶಾಂತವಾಗಿರುವ ಗ್ರಂಥಾಲಯ, ಕ್ರೀಡಾ ವಿಭಾಗದ ಚಟುವಟಿಕೆಗಳು, ಎನ್.ಸಿ.ಸಿ, ಎನ್.ಎಸ್.ಎಸ್, ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕ ಮತ್ತು ಬೋಧಕೇತರ ಸಿಬ್ಬಂದಿಯವರ ಪರಿಶ್ರಮ ಮೆಚ್ಚುವಂತದ್ದಾಗಿದೆ ಎಂದರು.
ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹಾಗೂ ಕಾಲೇಜಿನ ಬೋಧಕರು, ಬೋಧಕೇತರರು ಉಪಸ್ಥಿತರಿದ್ದರು.