ಕಂಪ್ಲಿ: ಪಟ್ಟಣದ ಮಾಂಸ ಕಮಾಲ್‌ನಲ್ಲಿ ಸತ್ತ, ರೋಗಪೀಡಿತ ಕುರಿ, ದನದ ಮಾಂಸ ಮಾರುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಶು ಆಸ್ಪತ್ರೆಯ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಕೆ.ಯು.ಬಸವರಾಜಗೆ ನಾಗರಿಕರು ಬುಧವಾರ ಮನವಿ ಸಲ್ಲಿಸಿದರು.
ಪುರಸಭೆ ಸದಸ್ಯ ಸಿ.ಆರ್.ಹನುಮಂತ ಮಾತನಾಡಿ, ಮಾಂಸದ ಕಮಾಲ್‌ನಲ್ಲಿ ಗುಣಮಟ್ಟದ ಮಾಂಸ ಮಾರಾಟ ಮಾಡಲು ಸೂಕ್ತ ಕ್ರಮ ವಹಿಸಬೇಕಿದೆ. ಮಾಂಸ ಮಾರಾಟಗಾರರಿಗೆ ಈ ಕುರಿತು ತಿಳಿವಳಿಕೆ ನೀಡಬೇಕೆಂದು ಆಗ್ರಹಿಸಿದರು.
ಡಾ.ಕೆ.ಯು.ಬಸವರಾಜ ಮಾತನಾಡಿ, ಪಟ್ಟಣ ಹಾಗೂ ತಾಲೂಕಿನ ಎಲ್ಲ ಮಾಂಸ ಕಮಾಲ್‌ಗಳನ್ನು ಸ್ಥಳೀಯ ಆಡಳಿತದೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಪರಿಶೀಲಿಸಲಾಗುವುದು. ಕಾನೂನು ಉಲ್ಲಂಘಿಸಿದ ಕಮಾಲ್ ಮಾರಾಟಗಾರರ ನೋಂದಣಿ ರದ್ದುಪಡಿಸುವುದರೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿರಿಯ ಪಶು ವೈದ್ಯ ಪರಿವೀಕ್ಷಕ ಶಿವಪ್ಪ ವಿ.ದೇವಕ್ಕಿ, ಪ್ರಮುಖರಾದ ಜಿ.ರಾಮಣ್ಣ, ಡಾ.ಎ.ಸಿ.ದಾನಪ್ಪ, ಸಿ.ವೆಂಕಟೇಶ್, ಬಿ.ದೇವೇಂದ್ರ, ಕೆ.ಮಸ್ತಾನ್, ಬಿ.ಜಾಫರ್ ಇತರರಿದ್ದರು.