ಜಿಲ್ಲೆ

ಗುಣಮಟ್ಟದ ಕಾಯ್ದುಕೊಳ್ಳದಿದ್ದರೆ ಪ್ರೋತ್ಸಾಹ ಧನ ವಾಪಸ್

ಪಾಂಡವಪುರ: ರಾಸುಗಳ ಮಾಲೀಕರಿಗೆ ವಿಮೆ ಚೆಕ್, ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಧನ, ಗುಂಪು ವಿಮೆ ಯೋಜನೆಯಡಿ ಪರಿಹಾರ ಹಾಗೂ ಹಾಲು ಕರೆಯುವ ಯಂತ್ರಕ್ಕೆ ಸಬ್ಸಿಡಿ ಹಣ ಸೇರಿದಂತೆ ಒಟ್ಟು 26.86 ಲಕ್ಷ ರೂ.ಗಳ ಚೆಕ್‌ಗಳನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಫಲಾನುಭವಿಗಳಿಗೆ ವಿತರಿಸಿದರು.


ಮನ್‌ಮುಲ್ ಉಪಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಅಧಿಕಾರಕ್ಕೆ ಬಂದಾಗ ಹಾಲಿನ ಗುಣಮಟ್ಟದಲ್ಲಿ ಕೊನೆಯ ಸ್ಥಾನದಲ್ಲಿದ್ದ ಪಾಂಡವಪುರ ತಾಲೂಕನ್ನು ಎರಡನೇ ಸ್ಥಾನಕ್ಕೆ ತರಲು ಶ್ರಮಿಸಿದ್ದೇನೆ. ಎಲ್ಲರೂ ಸಹಕಾರ ನೀಡಿದರೆ ತಾಲೂಕು ಪ್ರಥಮ ಸ್ಥಾನಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದರು.
ಹಾಲಿನ ಗುಣಮಟ್ಟದ ವಿಚಾರದಲ್ಲಿ ರೈತರು ರಾಜಿಯಾಗಬಾರದು. ಗುಣಮಟ್ಟದ ಹಾಲು ಪೂರೈಸದಿದ್ದರೆ ಸರ್ಕಾರದಿಂದ ಸಿಗುವ 5 ರೂ. ಪ್ರೋತ್ಸಾಹ ಧನ ವಾಪಸಾಗುತ್ತದೆ. ಹಿಂದೆ ಪ್ರತಿ ತಿಂಗಳು 40 ಲಕ್ಷ ರೂ. ಪ್ರೋತ್ಸಾಹ ಧನ ಸರ್ಕಾರಕ್ಕೆ ವಾಪಸಾಗುತ್ತಿತ್ತು. ಉತ್ಪಾದಕರು ಹಾಲಿನ ಗುಣಮಟ್ಟ ಕಾಯ್ದುಕೊಂಡಿರುವುರಿಂದ ಆ ಮೊತ್ತದ ಪ್ರಮಾಣ ಮೂರ‌್ನಾಲ್ಕು ಲಕ್ಷಕ್ಕೆ ಇಳಿದಿದೆ. ಹೀಗಾಗಿ ರೈತರು ಹಾಲಿನ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.


ಮಂಡ್ಯ ಒಕ್ಕೂಟಕ್ಕೆ ಪ್ರತಿನಿತ್ಯ 10 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಇದರಲ್ಲಿ 5 ಲಕ್ಷ ಲೀಟರ್ ಹಾಲನ್ನು ಮಾರಾಟ ಮತ್ತು ಇತರ ಹಾಲಿನ ಉತ್ಪನ್ನಗಳ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 5 ಲಕ್ಷ ಲೀಟರ್ ಹಾಲು ಉಳಿಕೆಯಾಗುತ್ತಿದೆ. ಆದರೂ, ಒಕ್ಕೂಟ ಹಾಲು ಪೂರೈಸಿದ ಪ್ರತಿಯೊಬ್ಬರಿಗೂ ತಪ್ಪದೆ ವಾರಕ್ಕೊಮ್ಮೆ ಬಟವಾಡೆ ಮಾಡುತ್ತಿದೆ. ರೈತರು ತರಕಾರಿ ಅಥವಾ ಇನ್ನಿತರ ಬೆಳೆಗಳನ್ನು ಬೆಳೆದರೆ ಮಾರುಕಟ್ಟೆ ದರ ಬಿದ್ದು ಹೋದಾಗ ನಷ್ಟ ಅನುಭವಿಸುತ್ತಾರೆ. ಆದರೆ ಹೈನುಗಾರಿಕೆಯಿಂದ ಎಂದೂ ನಷ್ಟವಾಗುವುದಿಲ್ಲ ಎಂದರು.

ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರಣಾಧಿಕಾರಿಗಳಾದ ಜಗದೀಶ್, ಪ್ರಜ್ವಲ್, ನಿಖಿಲ್ ಇತರರು ಇದ್ದರು.