ದೇವದುರ್ಗ: ಕೆಕೆಆರ್‌ಡಿಬಿ ಅನುದಾನದಲ್ಲಿ ಜನರಿಗೆ ಮೂಲಸೌಲಭ್ಯ ಕಲ್ಪಿಸಲು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಸೂಚಿಸಿದರು.
ತಾಲೂಕಿನ ನಗರಗುಂಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನರೆವೇರಿಸಿ ಮಾತನಾಡಿದರು. ನಗರಗುಂಡ ಕ್ರಾಸ್‌ನಿಂದ ಕೋಣಚಪ್ಪಳಿವರೆಗೆ ಸುಮಾರು 6ಕಿಮೀ ರಸ್ತೆ ನಿರ್ಮಾಣಕ್ಕೆ 6ಕೋಟಿ ರೂ. ಮಂಜೂರು ಮಾಡಲಾಗಿದೆ. ಸರ್ಕಾರದ ಅನುದಾನ ಸರಿಯಾಗಿ ಬಳಕೆ ಮಾಡುವಲ್ಲಿ ಅಧಿಕಾರಿಗಳು ನಿಗವಹಿಸಬೇಕು. ಕ್ಷೇತ್ರಕ್ಕೆ ಬರುವ ಅನುದಾನವನ್ನು ಎಲ್ಲ ಗ್ರಾಮಗಳಿಗೂ ಹಂತಹಂತವಾಗಿ ಹಂಚಿಕೆ ಮಾಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ರಾಮನಾಳದಲ್ಲಿ 1.28ಕೋಟಿ ರೂ. ವೆಚ್ಚ, ಇಟಗಿಯಲ್ಲಿ 2.75 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಮಾತಳ್ಳಿ ಗ್ರಾಮದಲ್ಲಿ 1.36ಕೋಟಿ ವೆಚ್ಚದಲ್ಲಿ ಭವನ, ಗಾಗಲ್, ಹೇರೂರು, ಸೂಗೂರಾಳ ಸೇರಿ ವಿವಿಧ ಹಳ್ಳಿಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಗ್ರಾಮಸ್ಥರು ಸಹಕಾರ ನೀಡಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದರು.
ಪಿಡಬ್ಲುೃಡಿ ಎಇಇ ಬನ್ನಪ್ಪ, ಬಿಇಒ ಕೆ.ಮಹಾದೇವಯ್ಯ, ಮುಖಂಡರಾದ ಸಿದ್ದಣ್ಣತಾತ ಮುಂಡರಗಿ, ಸಿದ್ದಣ್ಣ ಗಣೇಕಲ್, ತಿಮ್ಮರೆಡ್ಡಿ ನಾಯಕ, ಮಹೇಶಗೌಡ ಕಾಕರಗಲ್, ಮಲ್ಲು ಗಲಗ, ಮಂಜನಾಥ ಮಾತ್ಪಳ್ಳಿ, ರಮೇಶ ಕುರ್ಕಿಹಳ್ಳಿ, ಉಮಾಪತಿಗೌಡ ನಗರಗುಂಡ, ಕೆ.ವೆಂಕಟೇಶಗೌಡ, ರಂಗನಾಥ ಜಾಲಹಳ್ಳಿ, ಬಸವರಾಜ ಯರಮಸಾಳ ಇದ್ದರು.