ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣಕ್ಕೆ ಶಾಸಕ ಎನ್.ಮಹೇಶ್ ಭೂಮಿಪೂಜೆ ಸಲ್ಲಿಸಿದರು. 
ಜಿಲ್ಲೆ

ಗುಣಮಟ್ಟದ ಕಾಮಗಾರಿ ಕೈಗೊಳ್ಳಿ

ಯಳಂದೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ, ಶಾಲಾ ಕೊಠಡಿಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕ್ರಮವಹಿಸಬೇಕೆಂದು ಶಾಸಕ ಎನ್.ಮಹೇಶ್ ಸೂಚಿಸಿದರು.

ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮುಸ್ಲಿಂ ಬೀದಿಯಲ್ಲಿ 30 ಲಕ್ಷ ರೂ. ವೆಚ್ಚದ ಸಿಸಿರಸ್ತೆ, ಚರಂಡಿ ಕಾಮಗಾರಿ, 21.20 ಲಕ್ಷ ರೂ. ವೆಚ್ಚದ ಸರ್ಕಾರಿ ಉರ್ದು ಬಾಲಕಿಯರ ಪ್ರಾಥಮಿಕ ಶಾಲೆಯ 2 ಕೊಠಡಿ ನಿರ್ಮಾಣ, 31.80 ಲಕ್ಷ ರೂ. ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ಕೊಠಡಿಗಳ ನಿರ್ಮಾಣ, 10.60 ಲಕ್ಷ ರೂ. ವೆಚ್ಚದ ಕೆ.ಹೊಸೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣ ಹಾಗೂ ಬನ್ನಿಸಾರಿಗೆ ಗ್ರಾಮದ ಸರ್ಕಾರಿ ಕೊಠಡಿ, ಮಾಂಬಳ್ಳಿ ಉರ್ದು ಬಾಲಕರ ಪ್ರಾಥಮಿಕ ಶಾಲೆ 2 ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ ಎಂದು ತಿಳಿಸಿದರು.

ತಾಲೂಕಿನ ಸತತ ಮಳೆ ಹಾಗೂ ಸುವರ್ಣಾವತಿ ಹೊಳೆ ತುಂಬಿ ಹರಿದ ಪರಿಣಾಮ ಸುತ್ತಮುತ್ತ ಪ್ರದೇಶದ ನಿವಾಸಿಗಳ ಮನೆಗಳ ಗೋಡೆಗಳು ಕುಸಿದು ಹೋಗಿದ್ದು, ಸಂಪೂರ್ಣವಾಗಿ ಶಿಥಿಲಗೊಂಡಿವೆ. ಇವರಿಗೆ ಗ್ರಾಮ ಪಂಚಾಯಿತಿ ಮನೆಗಳ ಆಯ್ಕೆ ಮಾಡುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಬನ್ನಿಸಾರಿಗೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಬಿಇಒ ಕೆ.ಕಾಂತರಾಜು, ಲೋಕೋಪಯೋಗಿ ಇಲಾಖೆ ಜೆಇ ಸುರೇಂದ್ರ, ಸತೀಶ್, ಮುಖಂಡರಾದ ಮಲ್ಲೇಶ್, ಮಾಂಬಳ್ಳಿ ರಾಮು, ಶಿವಕುಮಾರ್, ಶಿಕ್ಷಕ ಅಮ್ಮನಪುರ ಮಹೇಶ್, ಗುತ್ತಿಗೆದಾರ ಪ್ರಸನ್ನಕುಮಾರ್, ಶ್ಯಾಮ್ ಕಾರ್ಲೆ, ಕೆ.ಹೊಸೂರು ನಾಗರಾಜು, ಹೊನ್ನೂರು ಚಿನ್ನಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಮಹದೇವಸ್ವಾಮಿ ಇತರರು ಹಾಜರಿದ್ದರು.