ಹೊಳೆಹೊನ್ನೂರು: ಕಡೆಯ ಶ್ರಾವಣ ಸೋಮವಾರದ ನಿಮಿತ್ತ ಗ್ರಾಮಾಂತರ ಭಾಗದಲ್ಲಿ ಭಕ್ತಾದಿಗಳು ದೇವಸ್ಥಾನಗಳಿಗೆ ಭೇಟಿ ನೀಡಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು. ಮುಂಜಾನೆಯಿಂದಲೇ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಲ್ಲಾಪುರದ ಪುರಾಣ ಪ್ರಸಿದ್ಧ ಶ್ರೀ ಗುಡ್ಡದ ಮಲ್ಲೇಶ್ವರ ದೇವಸ್ಥಾನದಲ್ಲಿ ಸ್ನೇಹಿತರ ತಂಡ ವಿಶೇಷ ಪೂಜೆ ಹಮ್ಮಿಕೊಂಡಿತ್ತು. ಸ್ವಾಮಿಯ ದ್ವಾರ ಬಾಗಿಲಿನಿಂದ ದೇವಸ್ಥಾನದ ವರೆಗೆ ಮಾಡಿದ ಪುಷ್ಪ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು. ಬೆಂಗಳೂರು ಮೂಲದ ಡೆಕೊರೇಷನ್ ಸಂಸ್ಥೆಯೊಂದು ದೇವಸ್ಥಾನಕ್ಕೆ ವಿಭಿನ್ನ ಫಲ, ಪುಷ್ಪಗಳನ್ನು ಬಳಸಿ ಗೋಪುರ ಹಾಗೂ ದೇವಸ್ಥಾನವನ್ನು ವಿಶೇಷವಾಗಿ ಸಿಂಗರಿಸಿತ್ತು.
ಸೋಮವಾರ ದೇವರ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದಕ್ಕಾಗಿ 40ಕ್ಕೂ ಅಧಿಕ ಬಾಣಸಿಗರು ಅಡುಗೆ ಸಿದ್ಧಪಡಿಸಿದ್ದರು. ಕಾಯಿ ಹೋಳಿಗೆ ತುಪ್ಪ, ಪಾಯಸ, ಕಾಳಿನ ಪಲ್ಯಾ, ಪುಳಿಯೋಗರೆ, ಅನ್ನ-ಸಂಬಾರು ವಿತರಿಸಲಾಯಿತು. ಮಹಿಳೆಯರಿಗೆ ಉಡುಗೊರೆ ನೀಡಿ ಸತ್ಕರಿಸಲಾಯಿತು. ಅಂಧ ಸಂಗೀತಗಾರರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.